Malenadu Mitra
ರಾಜ್ಯ ಶಿವಮೊಗ್ಗ

ವಿದ್ಯಾರ್ಥಿಗಳು ಅಂಕಗಳಿಕೆಯೊಂದಿಗೆ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು, ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಸರ್ಜಿ ಅಭಿಮತ

ಶಿವಮೊಗ್ಗ: ವಿದ್ಯಾರ್ಥಿಗಳು ಅಂಕಗಳಿಕೆಯೊಂದಿಗೆ ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಕ್ಸಸ್ ಎಂಬುದು ಅಂಕಗಳಿಗೆ ಸೀಮಿತವಾಗದೆ ಬದುಕನ್ನು ರೂಪಿಸಿಕೊಳ್ಳುವ ದಾರಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಭಾನುವಾರ ಶಿವಮೊಗ್ಗ ಕುವೆಂಪು ರಂಗಮಂದಿರಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರಿ ನೌಕರರ ಸಂಘವು ನೌಕರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡುವುದು ಅವರಿಗೆ ಮುಂದಿನ ಜೀವನಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರವನ್ನೂ ಕಲಿಸಬೇಕು. ನೌಕರರ ಶ್ರೇಯಸ್ಸಿಗೆ ಸಂಘದ ಕೆಲಸಗಳು ಪ್ರಶಂಸನೀಯ ಎಂದು ಹೇಳಿದರು.

ಮಕ್ಕಳಿಗೆ ಪ್ರೇರಣಾ ನುಡಿಗಳನ್ನಾಡಿದ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು, ಮಕ್ಕಳಿಗೆ ಮುಖ್ಯ ಪ್ರೇರಣೆ ಪೋಷಕರೇ ಆಗಿದ್ದಾರೆ. ಕಷ್ಟ ಪಟ್ಟು ಓದಿ ಸರ್ಕಾರಿ ನೌಕರಿ ಪಡೆದು ನಿಮ್ಮನ್ನು ಈ ಹಂತಕ್ಕೆ ತಂದಿರುವ ಪೋಷಕರ ಪಾತ್ರ ಅತ್ಯಂತ ದೊಡ್ಡದು.ಅವರೇ ನಿಮ್ಮ ರೋಲ್ ಮಾಡೆಲ್‌ಗಳು. ನಿಮ್ಮ ಭವಿಷ್ಯ ಅವರಿಗಿಂತ ಉತ್ತಮವಾಗಿ ರೂಪುಗೊಳ್ಳಬೇಕೆಂದರೆ ಶ್ರಮ ಮುಖ್ಯವಾಗಿದೆ. ಈ ದಿಸೆಯಲ್ಲಿ ಮಕ್ಕಳು ಸಾಗಬೇಕೆಂದರು

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಸ್ನೇಹಲ್ ಲೋಖಂಡೆ ಅವರು ಮಾತನಾಡಿ, ಇಂದು ಮಕ್ಕಳಿಗೆ ವಿಪುಲ ಅವಕಾಶಗಳಿದ್ದು, ನಿಮ್ಮ ಆಸಕ್ತಿಯ ವಿಷಯ ಆಯ್ಕೆಮಾಡಿಕೊಂಡು ಮುನ್ನಡೆಯಿರಿ ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ,ಮಕ್ಕಳು ಸಮಾಜದ ಶಕ್ತಿ. ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಕುಟುಂಬ ಹಾಗೂ ದೇಶಕ್ಕೆ ಬೆಳಕಾಗಬೇಕು. ಯಶಸ್ಸ ಎನ್ನುವುದು ಬರೀ ಅಂಕಗಳಿಂದ ನಿರ್ಧಾರ ಅಗುವುದಿಲ್ಲ. ಇಲ್ಲಿಂದು ನೀವು ಯಾವ ಪಥದಲ್ಲಿ ಸಾಗುವಿರಿ ಮತ್ತು ಹೇಗೆ ಜೀವನ ರೂಪಿಸಿಕೊಳ್ಳುವಿರಿ ಎಂಬುದು ಮುಖ್ಯ. ಅವಕಾಶ ಬಳಸಿಕೊಂಡು ಉನ್ನತ ವಿದ್ಯೆ ಮತ್ತು ಹುದ್ದೆ ಗಳಿಸಿಕೊಳ್ಳಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು, ರಾಜ್ಯದಲ್ಲಿ ಒಟ್ಟು ೮ ಸಾವಿರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಬದಲಾಗುತ್ತಿರುವ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಸೆಳೆತಕ್ಕೆ ಸಿಗದೆ ಮಕ್ಕಳು ಸ್ವಾಭಿಮಾನಿಗಳಾಗಿ ಬೆಳೆಯಬೇಕು. ತಂದೆ ತಾಯಿ ಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಮುಂದೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿದರು. ಮೋಹನ್ ಕುಮಾರ್ ಸ್ವಾಗತಿಸಿದರು. ಡಾ.ಸಿದ್ದರಾಮಣ್ಣ, ಪಾಪಣ್ಣ, ಕೃಷ್ಣಮೂರ್ತಿ, ಸದಾನಂದ,ಸಿದ್ದೇಶ್ವರ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ವಾಣಿಶಶಿಧರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕ ಪಡೆದ ೫೦೦ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಏಳನೇ ವೇತನ ಆಯೋಗದ ಶಿಫಾರಸುಗಳು ಆಗಸ್ಟ್ ತಿಂಗಳಲ್ಲಿ ಜಾರಿಯಾಗುವ ಭರವಸೆ ಇದೆ. ಈ ಸಂಬಂಧ ಸಿಎಂ ಹಾಗೂ ಡಿಸಿಎಂ ಬಳಿ ಮನವಿ ಮಾಡಿದ್ದೇವೆ. ಉಚಿತ ಆರೋಗ್ಯ ವಿಮೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಯಾದರೆ ನೌಕರ ವರ್ಗದ ದೊಡ್ಡ ಸಮಸ್ಯೆಗಳು ಬಗೆಹರಿದಂತೆ. ಈ ದಿಸೆಯಲ್ಲಿ ಸಂಘಟನೆ ಕೆಲಸ ಮಾಡುತ್ತಿದೆ.

ಸಿಎಸ್.ಷಡಾಕ್ಷರಿ, ನೌಕರರ ಸಂಘದ ರಾಜ್ಯಾಧ್ಯಕ್ಷ

ಪ್ರತಿಭೆ ಇದ್ದವರು ಮುಂದೆ ಬರುತ್ತಾರೆ. ಇಂದು ಉತ್ತಮ ಶಿಕ್ಷಣ ಪಡೆಯುವ ಅವಕಾಶ ಎಲ್ಲರಿಗೂ ಇದೆ. ಸ್ಪರ್ಧೆಯಲ್ಲಿ ಗೆದ್ದವರು ಜೀವನದಲ್ಲೂ ಗೆಲ್ಲುತ್ತಾರೆ.

ಎಸ್.ರವಿಕುಮಾರ್, ಕರ್ನಾಟಕ ಭೋವಿ ನಿಗಮದ ಅಧ್ಯಕ್ಷ

ಸಮಾಜದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಹೊಂದಿದ ಮಕ್ಕಳಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಈ ದಿಸೆಯಲ್ಲಿ ಪೋಷಕರು ಮಕ್ಕಳನ್ನು ಬೆಳೆಸಬೇಕು.


ಹೆಚ್.ಎಸ್.ಸುಂದರೇಶ್, ಸೂಡಾ ಅಧ್ಯಕ್ಷ

Ad Widget

Related posts

ಹೋರಿ ಹಬ್ಬದಲ್ಲಿ ಹೋರಿ ತಿವಿದು ಇಬ್ಬರು ಸಾವು

Malenadu Mirror Desk

ರೈತರಿಗೆ ಒಂದಿಂಚು ಭೂಮಿ ನೀಡುವ ಕಾರ್‍ಯಕ್ರಮ ನೀಡದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು :ಕಾಗೋಡು ತಿಮ್ಮಪ್ಪ

Malenadu Mirror Desk

ಕೊರೊನ ವ್ಯಾಕ್ಸಿನ್ ಬಗ್ಗೆ ತಪ್ಪು ಕಲ್ಪನೆ ಬೇಡ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.