ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣವನ್ನು ಮರೆಮಾಚಲು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ಇಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವರೂ ಆದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಮತ್ತು ಅನುಭವಿ ರಾಜಕಾರಣಿಯಾದ ಆಯನೂರು ಮಂಜುನಾಥ್ ಅವರ ಹೇಳಿಕೆಯನ್ನು ಪಕ್ಷ ಖಂಡಿಸುತ್ತದೆ. ಶಿವಮೊಗ್ಗ ಜಿಲ್ಲೆ ಹಾಗೂ ರಾಜ್ಯಕ್ಕೆ ಯಡಿಯೂರಪ್ಪ ಅವರು ನೀಡಿರುವ ಕೊಡುಗೆಯನ್ನು ಅವರು ಗಮನಿಸಬೇಕು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಲಯ ಮತ್ತು ಜನತಾ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಪಡೆದ ಯಡಿಯೂರಪ್ಪ ಅವರ ಬಗ್ಗೆ ಆಯನೂರು ಮಂಜುನಾಥ್ ಅವರು ಲಘುವಾಗಿ ಮಾತನಾಡಬಾರದು. ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಿ ಚುನಾವಣೆ ರಾಜಕೀಯದಿಂದ ದೂರ ಇರುವ ಯಡಿಯೂರಪ್ಪ ಅವರ ಬಗ್ಗೆ ವಿನಾ ಅರೋಪ ಮಾಡುವುದನ್ನು ನಾವು ಖಂಡಿಸುತ್ತೇವೆ. ಯಾವುದೇ ಹಿರಿಯ ರಾಜಕಾರಣಿಯ ಬಗ್ಗೆ ಟೀಕೆ ಮಾಡುವಾಗ ಯೋಚನೆ ಮಾಡಬೇಕು ಎಂದು ಹೇಳಿದರು.
ಆಯನೂರು ಮಂಜುನಾಥ್ ಅವರು ನಾಲ್ಕು ಸದನಗಳನ್ನು ಪ್ರತಿನಿಧಿಸಿದ್ದವರು, ಅನೇಕ ಹೋರಾಟ ಮಾಡಿಕೊಂಡು ಬಂದಿರುವವರು. ಈಗ ಕಾಂಗ್ರೆಸ್‌ನಲ್ಲಿದ್ದುಕೊಂಡು ಅಲ್ಲಿನ ನಾಯಕರನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತಿದ್ದಾರೆ. ಮುಡಾ ಮತ್ತು ವಾಲ್ಮೀಕಿ ನಿಗಮದ ಭ್ರಷ್ಟಾಚಾರಗಳ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತಿದೆ. ತಮ್ಮ ಪಕ್ಷದ ಸರಕಾರ ಮತ್ತು ನಾಯಕರ ಮೇಲಿನ ಆರೋಪಗಳನ್ನು ಮರೆಮಾಚಲು ಹಿರಿಯ ರಾಜಕೀಯ ಮುತ್ಸದ್ದಿ ಯಡಿಯೂರಪ್ಪ ಅವರ ಮೇಲೆ ಆರೋಪ ಮಾಡುವುದು ತರವಲ್ಲ. ಆಯನೂರು ಮಂಜುನಾಥ್ ಈ ರೀತಿಯ ಟೀಕೆಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಯಡಿಯೂರಪ್ಪರಿಂದ ಲಾಭ:
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡರು ಮಾತನಾಡಿ, ಆಯನೂರು ಮಂಜುನಾಥ್ ಅವರು ಎಲ್ಲರ ಅಧಿಕಾರವನ್ನು ಬಿಜೆಪಿ ಮತ್ತು ಯಡಿಯೂರಪ್ಪರ ಕೃಪೆಯಿಂದ ಪಡೆದಿದ್ದಾರೆ. ಈಗ ಪ್ರತಿ ಪಕ್ಷದಲ್ಲಿದ್ದ ಮಾತ್ರಕ್ಕೆ ಎಲ್ಲವನ್ನೂ ಮರೆತು ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತನಾಡಬಾರದು. ಅವರು ಯಡಿಯೂರಪ್ಪರ ಮೇಲೆ ಮಾಡಿರುವ ಆರೋಪಕ್ಕೆ ಕ್ಷಮೆ ಯಾಚಿಸಬೇಕೆಂದು ಹೇಳಿದರು. ಹದಿನೈದು ವರ್ಷಗಳ ಹಿಂದೆ ಕೆಐಡಿಬಿ ಇಂದ ಪಡೆದ ಜಮೀನಿನ ಬಗ್ಗೆ ಈಗ ಯಾಕೆ ಮಾತನಾಡುತಿದ್ದಾರೊ ಗೊತ್ತಿಲ್ಲ. ರಾಜಕೀಯ ಅಧಿಕಾರದಲ್ಲಿದ್ದ ಮಾತ್ರಕ್ಕೆ ವ್ಯವಹಾರ ಮಾಡುವುದು ತಪ್ಪು ಎಂದು ಹೇಳಲಾಗದು. ಆಯನೂರು ಮಂಜುನಾಥ್ ನಮ್ಮ ಪಕ್ಷದಲ್ಲಿಯೇ ಇದ್ದವರು, ಇಲ್ಲಿಂದಲೇ ಎಲ್ಲಾ ಅಧಿಕಾರ ಪಡೆದವರು. ಹಿರಿಯ ನಾಯಕರ ಬಗ್ಗೆ ಟೀಕೆ ಮಾಡುವ ಮುನ್ನ ಎಚ್ಚರವಹಿಸಬೇಕು ಎಂದು ರುದ್ರೇಗೌಡ ಹೇಳಿದರು.
ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಎಸ್.ದತ್ತಾತ್ರಿ, ಶಿವರಾಜ್, ಜ್ಞಾನೇಶ್, ಕೆ.ವಿ.ಅಣ್ಣಪ್ಪ ಮತ್ತಿತರರು ಹಾಜರಿದ್ದರು.
ರಾಜ್ಯದ ಆರ್ಥಿಕ ಸ್ಥಿತಿ ಶೋಚನೀಯ: ಪಿ.ರಾಜೀವ್
ಶಿವಮೊಗ್ಗ: ರಾಜ್ಯ ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ನೀತಿ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಅಂಚಿಗೆ ತರಲಿದೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಕುಡುಚಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಅಶಿಸ್ತು ಹೆಚ್ಚಾಗಿದೆ. ಅಭಿವೃದ್ಧಿಗೆ ಹಣ ಇಲ್ಲವಾಗಿದೆ. ಯಾವುದೇ ವಿಧಾನ ಸಭೆ ಕ್ಷೇತ್ರಕ್ಕೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿಲ್ಲ. ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಲಾಗಿದೆ.ಆದರೆ ಸಾರಿಗೆ ನಿಗಮಗಳ ಸಶಕ್ತತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಡಾ, ವಾಲ್ಮೀಕಿ ನಿಗಮ, ಎಸ್ಸಿಎಸ್ಟಿ ನಿಗಮ ಸೇರಿದಂತೆ ಭ್ರಷ್ಟಾಚಾರದ ಸರಣಿಗಳನ್ನೇ ರಾಜ್ಯ ಸರಕಾರ ಮಾಡುತ್ತಿದೆ ಎಂದರು.
ವಿತ್ತೀಯ ಶಿಸ್ತು ನಿರ್ವಹಣೆಯಲ್ಲಿ ವಿಫಲವಾಗಿರುವ ಸಿದ್ದರಾಮಯ್ಯನವರು ಪ್ರತಿಬಾರಿ ಉದ್ದನೆಯ ಭಾಷಣೆ ಹೊಡೆಯುತ್ತಾರೆ ಆದರೆ ರಾಜ್ಯದಲ್ಲಿ ವಿತ್ತೀಯ ಕೊರತೆ ಬಜೆಟ್ ಮಂಡಿಸಿ ವರ್ಷದಿಂದ ವರ್ಷಕ್ಕೆ ಸಾಲದ ಹೊರೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಮತ್ತು ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರಗಳು ಮಿರಿಮೀರಿವೆ. ಈ ಬಗ್ಗೆ ದಾಖಲೆಗಳನ್ನು ಕಲೆ ಹಾಕುತಿದ್ದು, ಎಲ್ಲವನ್ನೂ ಮುಂದೆ ಬಹಿರಂಗ ಮಾಡುತ್ತೇವೆ. ಕಾರ್ಮಿಕ ಕಲ್ಯಾಣ ನಿಧಿಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ರಾಜೀವ್ ಆರೋಪಿಸಿದರು.
ಬಿಜೆಪಿ ಬಲಾಢ್ಯ:
ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಪಕ್ಷ ಬಲಗೊಂಡಿದೆ. ಒಂದೂವರೆ ಕೋಟಿ ಮತದಾರರಿಗೆ ಸದಸ್ಯತ್ವ ನೀಡುವ ಗುರಿಯನ್ನು ಹೊಂದಿದ್ದು, 55 ಸಾವಿರ ಬೂತ್‌ಗಳಲ್ಲಿನ ಚಟುವಟಿಕೆಯನ್ನು ವಿಜಯೇಂದ್ರ ಗಮನಿಸುತ್ತಿದ್ದಾರೆ. ಅವರು ಅಧ್ಯಕ್ಷರಾದ ಮೇಲೆ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಮೈಸೂರು ಚಲೊ ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಜನರಿಗೆ ಹತ್ತಿರವಾಗುವ ಕೆಲಸ ಮತ್ತು ಹೋರಾಟ ಮಾಡಲಿದೆ. ಈ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯುವಲ್ಲಿ ಬಿಜೆಪಿ ಯಶಸ್ವಿಯಾ