ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐಎ)ಗೆ ವಹಿಸಿದ್ದನ್ನು ಪ್ರಶ್ನಿಸಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಶಿವಮೊಗ್ಗ ನಗರದ ಹೊಸಬೀದಿಯ ನಿವಾಸಿ ಎ. ರೋಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಶ್ರೀನಿವಾಸ ಹರೀಶ್ ಕುಮಾರ್ ಮತ್ತು ನ್ಯಾ.ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು, ಪ್ರಕರಣ ವನ್ನು ಎನ್‌ಐಎಗೆ ವಹಿಸಲು ಅನುಮತಿ ಪಡೆದಿಲ್ಲ ಎಂಬ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಅಲ್ಲದೆ, ಪರಿಶೀಲಿಸಿದ ನಂತರವಷ್ಟೇ ತನಿಖೆಯ ಹೊಣೆಯನ್ನು ಎನ್‌ಐಎಗೆ ವಹಿಸಲಾಗಿದೆ. ಏನೂ ಆಧಾರವಿಲ್ಲದೆ ತನಿಖೆ ವರ್ಗಾವಣೆ ಮಾಡಲಾಗಿದೆ ಎಂಬ ವಾದವನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದೆ. ಇನ್ನೂ ಹರ್ಷ ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದ್ದು, ಕೋರ್ಟ್ ವಿಚಾರಣೆ ಆರಂಭಿಸಿದೆ.