ಶಿವಮೊಗ್ಗ: ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಪ್ರತಿಬಿಂಬಿಸುವ ನಾಡಹಬ್ಬ ದಸರಾ ನವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ರಾಜ್ಯದ ಎರಡನೇ ಅತಿದೊಡ್ಡ ದಸರಾ ಉತ್ಸವ ಎಂದೇ ಖ್ಯಾತಿ ಪಡೆದ ಶಿವಮೊಗ್ಗ ದಸರಾಗೆ ನಟ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಗರದ ಕೋಟೆ ಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಚಾಲನೆ ನೀಡಿದ್ರು.
ಚಂಡಿಕಾ ದೇವಾಲಯದಲ್ಲಿ ಚಾಮುಂಡೇಶ್ವರಿ ಪ್ರತಿಷ್ಟಾಪನೆ
ನಗರದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಟಾಪನೆ ಮಾಡಲಾಗಿದೆ. ಇದಕ್ಕೂ ಮುನ್ನ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕೋಟೆ ಶ್ರೀ ಚಂಡಿಕಾ ದೇವಾಲಯದವರೆಗೆ ಬೆಳ್ಳಿಯ ಅಂಬಾರಿಯಲ್ಲಿರುವ ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಯನ್ನ ಅದ್ದೂರಿ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ತರಲಾಯ್ತು. ವಿವಿಧ ಕಲಾತಂಡಗಳ ಜೊತೆ ಅದ್ದೂರಿಯಾಗಿ ಸಾಗಿದ ದೇವಿಯ ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚೆನ್ನಬಸಪ್ಪ, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಸೇರಿದಂತೆ ಪಾಲಿಕೆ ಅಧಿಕಾರಿಗಳು, ಪಾಲಿಕೆ ಮಾಜಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಇನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಆಯೋಜಿಸಿರುವ ದಸರಾ ಉತ್ಸವ ಇಂದಿನಿಂದ 9 ದಿನಗಳ ಕಾಲ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಫರ್ಧೆಗಳನ್ನು ಆಯೋಜಿಸಲಾಗಿದ್ದು, ಕೊನೆಯ ದಿನ ನಗರದ ಫ್ರೀಡಂ ಪಾರ್ಕ್ ನಲ್ಲಿ ಅಂಬು ಕಡಿಯುವ ಮೂಲಕ ದಸರಾ ಕೊನೆಗೊಳ್ಳಲಿದೆ.
next post