ತೀರ್ಥಹಳ್ಳಿ : ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ಮುಂದುವರಿದಿದ್ದು, ಹೊಸನಗರ, ಶಿವಮೊಗ್ಗ ತಾಲೂಕಿನ ಬಳಿಕ ಇದೀಗ ತೀರ್ಥಹಳ್ಳಿ ತಾಲೂಕಿನಲ್ಲಿ ಕಾಡಾನೆ ಹಾವಳಿ ಶುರುವಾಗಿದೆ.
ತೀರ್ಥಹಳ್ಳಿ ತಾಲೂಕಿನ ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕುಂಬ್ರಿ ಗ್ರಾಮದ ಗಣೇಶ್ ಎಂಬುವರ ಜಮೀನಿಗೆ ಕಾಡಾನೆ ಲಗ್ಗೆ ಇಟ್ಟಿದ್ದು, ಭತ್ತದ ಬೆಳೆಯನ್ನು ಸಂಪೂರ್ಣ ನಾಶ ಮಾಡಿದೆ. ಕಾಡಾನೆ ಬೆಳೆಯನ್ನು ತಿನ್ನುವುದಕ್ಕಿಂತ ತುಳಿದು, ಹಾಳು ಮಾಡುವುದೇ ಜಾಸ್ತಿಯಾಗಿದ್ದು, ಆ ಭಾಗದ ರೈತರು ಆತಂಕಕ್ಕೊಳಗಾಗಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಕಾಡಾನೆ ಓಡಾಟ ನಡೆಸುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾರು ಸ್ಪಂದನೆ ಮಾಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೆಳೆದಂತಹ ಬೆಳೆ ನಾಶವಾಗಿರುವುದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ದಶಕದ ಸಮಸ್ಯೆಗೆ ಇನ್ನು ಸಿಗದ ಪರಿಹಾರ:
ಇನ್ನು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯಲ್ಲಿ ಕಳೆದೊಂದು ದಶಕದಿಂದಲೂ ಒಂಟಿ ಸಲಗ ಹಾವಳಿ ನಡೆಸುತ್ತಲೇ ಇದೆ. ಮುಖ್ಯವಾಗಿ ಆಗುಂಬೆ ಗ್ರಾ.ಪಂ ವ್ಯಾಪ್ತಿಯ ಮಲ್ಲಂದೂರು, ಕಾರೇಕುಂಬ್ರಿ, ಉಳುಮಡಿ, ಅಗಸರಕೋಣೆ, ವಾಟೇಹಳ್ಳ, ಗೌರಿಹಕ್ಕಲು, ಬಿದರಗೋಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಒಂಟಿ ಸಲಗ ಜನರಿಗೆ ನೆಮ್ಮದಿ ಜೀವನ ನಡೆಸಲು ಬಿಡುತ್ತಿಲ್ಲ.
2013ರಲ್ಲಿ ಮಲ್ಲಂದೂರು ಸಮೀಪ ಕಾಡಾನೆ ತುಳಿತದಿಂದ ರೈತರೊಬ್ಬರು ಮೃತಪಟ್ಟಿದ್ದರು. ಅಂದಿನಿಂದಲೂ ಆಗುಂಬೆ ಭಾಗದ ಜನರು ಕಾಡಾನ ಸ್ಥಳಾಂತರಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಪಶ್ಚಿಮಘಟ್ಟ ವ್ಯಾಪ್ತಿಯ ಆಗುಂಬೆ ಭಾಗದಲ್ಲಿ ಆನೆ ಸೆರೆಹಿಡಿಯುವ ಕಾರ್ಯಾಚರಣೆ ಕಷ್ಟ ಸಾಧ್ಯ ಎಂದು ಮುಂದೂಡುತ್ತಲೇ ಇದ್ದು, ರೈತರಿಗೆ ದೊಡ್ಡ ತಲೆ ನೋವಾಗಿದೆ. ಇದೇ ಕಾರಣಕ್ಕೆ ಆನೆಯನ್ನು ಸ್ಥಳಾಂತರ ಮಾಡಿ ಇಲ್ಲವೇ ಕಾಡಾನೆ ತಡೆಗೆ ಟ್ರಂಚ್ ನಿರ್ಮಿಸುವಂತೆ ರೈತರು, ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.