ಶಿವಮೊಗ್ಗ: ದಸರಾದ ಜಂಬೂ ಸವಾರಿಗೆ ಚಾಲನೆ ಸಿಕ್ಕಿದ್ದು, ಸಕ್ರೆಬೈಲು ಬಿಡಾರದ ಸಾಗರ ಆನೆ ನೇತೃತ್ವದ ಗಜಪಡೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿವೆ.
ನಗರದ ಶಿವಪ್ಪ ನಾಯಕ ಅರಮನೆ ಎದುರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಾಯ್ತು. 450 ಕೆ.ಜಿ ತೂಕದ ಬೆಳ್ಳಿಯ ಅಂಬಾರಿ ಹೊತ್ತು ಗಾಂಭೀರ್ಯದ ನಡೆ ಆರಂಭಿಸಿದ ಗಜಪಡೆಗೆ ಕೋಟೆ ಶ್ರೀ ಸೀತಾ ರಾಮಾಂಜನೇಯ ದೇವಾಲಯದ ಎದುರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಚಿವರ ಪತ್ನಿ ಅನಿತಾ ಮಧು ಬಂಗಾರಪ್ಪ, ಶಾಸಕರಾದ ಎಸ್.ಎನ್. ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಬಲ್ಕಿಶ್ ಭಾನು, ಡಿ.ಎಸ್.ಅರುಣ್ ಪುಷ್ಪಾರ್ಚನೆ ಮಾಡುವ ಮೂಲಕ ದೇವಿಗೆ ನಮಿಸಿ, ಚಾಲನೆ ನೀಡಿದ್ರು.., ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ ಸಿಇಓ ಹೇಮಂತ್, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಉಪಸ್ಥಿತರಿದ್ದರು.
ಅಂಬಾರಿ ಹೊತ್ತ ಸಾಗರ್ ಆನೆಗೆ ಬಾಲಣ್ಣ, ಬಹದ್ದೂರ್ ಸಾಥ್
ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿರುವ ಸಾಗರ್ ಆನೆಗೆ ಕುಮ್ಕಿ ಆನೆಗಳಾಗಿ ಬಾಲಣ್ಣ ಹಾಗೂ ಬಹದ್ದೂರ್ ಆನೆ ಸಾಥ್ ನೀಡುತ್ತಿವೆ. ಜಂಬೂ ಸವಾರಿಗೆ ಡೊಳ್ಳು ಕುಣಿತ, ವೀರಗಾಸೆ, ಬೊಂಬೆ ಕುಣಿತದಂತ ವಿವಿಧ ಕಲಾತಂಡಗಳು ಮೆರಗು ನೀಡುತ್ತಿದ್ದು, ಸಾರ್ವಜನಿಕರು ಕೂಡ ಭಾಗಿಯಾಗಿದ್ದಾರೆ.