ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕರ್ನಾಟಕ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕೇಂದ್ರ( ಸೈನ್ಸ್ ಪಾರ್ಕ್) ಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಐತಿಹಾಸಿಕ ಹಿನ್ನಲೆಯುಳ್ಳ ಶಿಕ್ಷಣ ಸಂಸ್ಥೆ ಸಹ್ಯಾದ್ರಿ ಕಾಲೇಜು ಉಳಿಯಬೇಕಿದ್ದು,ಈ ಕೂಡಲೇ ಸರ್ಕಾರ ಈ ಯೋಜನೆ ಕೈಬಿಡಬೇಕು ಎಂದು ಸಹ್ಯಾದ್ರಿ ಕಾಲೇಜು ನಿವೃತ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಸವಳಂಗ ರಸ್ತೆಯ ನವುಲೆ ಗ್ರಾಮದ ಸರ್ವೆ ನಂ.112 ರಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸ್ಥಳ ಗುರುತಿಸಲಾಗಿತ್ತು. ಇಲ್ಲಿ, ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂನ 5 ಜನ ಉನ್ನತ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ಸ್ಥಳ ಪರಿಶೀಲಿಸಿ ವಿಜ್ಞಾನ ಕೇಂದ್ರ ಸ್ಥಾಪಿಸಲು ಅನುಮತಿ ನೀಡದ ಕಾರಣ, ಜಿಲ್ಲಾಧಿಕಾರಿ ಹಾಗೂ ಲೋಕಸಭಾ ಸದಸ್ಯರನ್ನೊಳಗೊಂಡ ಸಮಿತಿ ಸಹ್ಯಾದ್ರಿ ಕಾಲೇಜು ಆವರಣದ 7 ಎಕರೆ ಜಾಗದಲ್ಲಿ ಈ ಕೇಂದ್ರ ಸ್ಥಾಪನೆಗೆ ಸ್ಥಳ ಗುರುತಿಸಿ, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಗೆ ಹಸ್ತಾಂತರಿಸಿದೆ ಎಂದು ಸರ್ಕಾರದ ನಡಾವಳಿ ಪತ್ರದಲ್ಲಿ ಉಲ್ಲೇಖಸಿದೆ. ವಿಜ್ಞಾನ ಕೇಂದ್ರ ಸ್ಥಾಪನೆಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಸಹ್ಯಾದ್ರಿ ಕಾಲೇಜು ಜಮೀನಿನಲ್ಲಿ ಸ್ಥಾಪನೆಗೆ ಖಂಡಿತ ವಿರೋಧವಿದೆ. ಸಹ್ಯಾದ್ರಿ ಕಾಲೇಜು ಸಾವಿರಾರು ಬಡ ಮಕ್ಕಳ ಶೈಕ್ಷಣಿಕ ಕನಸನ್ನು ಈಡೇರಿಸುತ್ತಿದೆ. ಇದಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ಈ ಹಿಂದೆ ಖೇಲೋ ಇಂಡಿಯಾ ಯೋಜನೆಯನ್ನೂ ವಿರೋಧಿಸಲಾಗಿತ್ತು. ಅದೇ ರೀತಿ, ಪ್ರಸ್ತುತ ಜಾರಿಗೊಂಡಿರುವ ಯೋಜನೆ ಕೂಡ ವಿರೋಧಿಸುತ್ತೇವೆ ಎಂದಿದ್ದಾರೆ.
ಮಾಜಿ ಸಂಸದ ಆಯನೂರು ಮಂಜುನಾಥ್ ಕೂಡ ವಿರೋಧ
ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಸಹ್ಯಾದ್ರಿ ಕಾಲೇಜು ದುಷ್ಟಶಕ್ತಿಗಳ ಕೆಂಗಣ್ಣಿಗೆ ಗುರಿಯಾದಂತಿದೆ. ಪ್ರಸ್ತುತ ಖಾಸಗಿ ಕಾಲೇಜುಗಳ ಭರಾಟೆಯಲ್ಲಿ ಸಹ್ಯಾದ್ರಿ ಕಾಲೇಜು ಬಡವರು,ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತಿದೆ. ಆದ್ದರಿಂದ, ಇಲ್ಲಿ ಉನ್ನತಮಟ್ಟದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಇಲ್ಲಿನ ಕಾಲೇಜು ಆವರಣ ಶೈಕ್ಷಣಿಕ ಕಟ್ಟಡ ನಿರ್ಮಾಣ ಸೇರಿ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು. ಆದ್ದರಿಂದ ಇಲ್ಲಿ, ವಿಜ್ಞಾನ ಕೇಂದ್ರ ಸ್ಥಾಪನೆಗೆ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಗೆ 30 ವರ್ಷಕ್ಕೆ ಗುತ್ತಿಗೆ ನೀಡಿರುವುದಕ್ಕೆ ಸಂಪೂರ್ಣ ವಿರೋಧವಿದೆ ಎಂದು ಹೇಳಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ.ಪಿ. ಶ್ರೀಪಾಲ್ ಮಾತನಾಡಿ, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಈ ಯೋಜನೆ ಜಾರಿಗೊಂಡಿದೆ. ವಿಜ್ಞಾನ ಕೇಂದ್ರ ಸ್ಥಾಪನೆಗೆ ಸಹ್ಯಾದ್ರಿ ಕಾಲೇಜು ಜಮೀನು ಮಂಜೂರು ಮಾಡುವ ಬಗ್ಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ 2022 ರಲ್ಲಿ ಸಿಂಡಿಕೇಟ್ ಸಭೆ ನಡೆಸಿ, ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಗುತ್ತಿಗೆ ನೀಡಲಾಗಿದೆ. ಈ ನಿರ್ಧಾರ ಕೈಬಿಡುವ ಬಗ್ಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶ್ರೀಪಾಲ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಸಹ್ಯಾದ್ರಿ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ಸಂಚಾಲಕರಾದ ಚಂದ್ರಪ್ಪ ಜೋಗಿ, ಆರ್. ಯೋಗೀಶ್, ಶಿವಬಸಪ್ಪ, ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ್ ಉಪಸ್ಥಿತರಿದ್ದರು.