ಶಿವಮೊಗ್ಗ : ಜಿಲ್ಲೆಯ ವಿವಿಧ ಪೊಲೀಸ್ ಉಪವಿಭಾಗಗಳ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಮಹತ್ವದ ಕಾರ್ಯಾಚರಣೆ ನಡೆಸಿರುವ ಶಿವಮೊಗ್ಗದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಒಟ್ಟು 130 ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಪರಿಪಾಲನೆಗೆ ಆದ್ಯತೆ ನೀಡುತ್ತಿರುವ ಶಿವಮೊಗ್ಗ ಪೊಲೀಸ್ ಇಲಾಖೆ, ಕೆಲ ತಿಂಗಳ ಹಿಂದೆಯಷ್ಟೇ ಕಾಲ್ನಡಿಗೆ ವಿಶೇಷ ಗಸ್ತು( Foot Patrolling) ಮತ್ತು ಏರಿಯಾ ಡಾಮಿನೇಶನ್(Area Domination) ಆರಂಭಿಸಿತ್ತು. ಅದರ ಮುಂದುವರಿದ ಭಾಗವಾಗಿ ಸೋಮವಾರ ಸಂಜೆ ಕೂಡ ವಿಶೇಷ ಕಾರ್ಯಾಚರಣೆ ನಡೆಸಿರುವ ಶಿವಮೊಗ್ಗ ಪೊಲೀಸರು, 107 ಲಘು ಪ್ರಕರಣ ಮತ್ತು ಕೋಟ್ಪಾ ಕಾಯ್ದೆಯಡಿ 23 ಪ್ರಕರಣ ಸೇರಿದಂತೆ ಒಟ್ಟು 130 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಆಯಾ ಡಿವೈಎಸ್ಪಿಗಳ ನೇತೃತ್ವದಲ್ಲಿ ಕಾರ್ಯಾಚರಣೆ:
ಶಿವಮೊಗ್ಗ ಜಿಲ್ಲೆಯ ಪೊಲೀಸ್ ಉಪವಿಭಾಗಗಳ ವ್ಯಾಪ್ತಿಯಲ್ಲಿ ಆಯಾ ಡಿವೈಎಸ್ಪಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಶಿವಮೊಗ್ಗ ‘ಎ’ ಉಪ ವಿಭಾಗ ವ್ಯಾಪ್ತಿಯ ಶಿವಮೊಗ್ಗ ಬಸ್ ನಿಲ್ದಾಣ, ಬಿ.ಹೆಚ್ ರಸ್ತೆ, ಕೋಟೆ ರಸ್ತೆ, ಲಷ್ಕರ್ ಮೊಹಲ್ಲಾ, ಟಿಪ್ಪುನಗರ, ವಿನಾಯಕ ವೃತ್ತ, ರಂಗನಾಥ ಬಡಾವಣೆ ಮತ್ತು ಶಿವಮೊಗ್ಗ ‘ಬಿ’ ಉಪವಿಭಾಗ ವ್ಯಾಪ್ತಿಯ ಬಸವನಗುಡಿ, ಉಷಾ ವೃತ್ತ, ರೈಲ್ವೆ ಸ್ಟೇಷನ್ ಹತ್ತಿರ, ಆಲ್ಕೊಳ, ರಾಗಿಗುಡ್ಡ, ಕುಂಸಿ, ಆಯನೂರು ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್, ಹೊಳೆ ಹೊನ್ನೂರು ವೃತ್ತ, ಗಾಂಧಿ ವೃತ್ತ, ಉಜಿನಿಪುರ, ಗೌಡರಹಳ್ಳಿ ಹಾಗೂ ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ವಿನಾಯಕ ನಗರ, ಅಂಬಾರಗೊಪ್ಪ, ಜಡೆ, ಕಾನ್ಕೇರಿ, ಶಿರಾಳಕೊಪ್ಪ ಬಸ್ ನಿಲ್ದಾಣದ ಹತ್ತಿರ ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ಬಾಳೆಬೈಲು, ಬೆಜ್ಜವಳ್ಳಿ , ಹೊಸನಗರ ಬಸ್ ನಿಲ್ದಾಣ, ನಗರದ ಚಿಕ್ಕಪೇಟೆಯಲ್ಲಿ ಏರಿಯಾ ಡಾಮಿನೇಶನ್ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ‘ಕಾಲ್ನಡಿಗೆ ವಿಶೇಷ ಗಸ್ತು’ ನಡೆಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.