ಶಿವಮೊಗ್ಗ : ಶರಾವತಿ ಮುಳುಗಡೆ ಸಂತ್ರಸ್ಥರ ಲಿಂಗನಮಕ್ಕಿ ಚಲೋ ಹೋರಾಟಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಸಾವಿರಾರು ರೈತರ ಮೊದಲ ದಿನದ ಪಾದಯಾತ್ರೆ ಭರದಿಂದ ತಾಳಗುಪ್ಪದತ್ತ ಸಾಗಿದೆ.
ಕಳೆದ ಮೂರು ದಿನದಿಂದ ಸಾಗರದ ಎಸಿ ಕಛೇರಿ ಆವರಣದಲ್ಲಿ ಆಹೋರಾತ್ರಿ ಹೋರಾಟ ನಡೆಸುತ್ತಿದ್ದ ರೈತರ ಲಿಂಗನಮಕ್ಕಿ ಚಲೋ ಗೆ ಸಮಾಜವಾದಿ ಹೋರಾಟಗಾರ ಬಿ.ಆರ್ ಜಯಂತ್ ಇಂದು ಚಾಲನೆ ನೀಡಿದ್ರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು, ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೈತ ಸಂಘಟನೆಗಳು ಕಳೆದ ನಾಲ್ಕು ದಿನಗಳಿಂದ ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಮುಂದುವರೆದ ಭಾಗವಾಗಿ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಗುರುವಾರದಿಂದ ಲಿಂಗನಮಕ್ಕಿ ಚಲೋ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಮಾರ್ಗ ಮಧ್ಯ ನೀರಿನ ವ್ಯವಸ್ಥೆ:
ಸಾಗರದ ಎಸಿ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಮಧ್ಯಾಹ್ನದ ವೇಳೆ ಸಿರಿವಂತೆ ಗ್ರಾಮ ತಲುಪಿತು. ಮಾರ್ಗ ಮಧ್ಯೆ ರೈತರಿಗೆ ಕುಡಿಯುವ ನೀರು ಹಾಗೂ ಬೆಲ್ಲದ ವ್ಯವಸ್ಥೆಯನ್ನು ಸಿರಿವಂತೆ ಗ್ರಾಮದ ಚಂದ್ರಶೇಖರ್ ಮಾಡಿದರು.
ಸಿರಿವಂತೆ ಗ್ರಾಮ ಪಂಚಾಯತಿ ವತಿಯಿಂದ ರೈತರಿಗೆ ಚಾಕಲೇಟ್ ವಿತರಿಸಿದರು. ತಾಳಗುಪ್ಪ ಸಮೀಪದ ಆಲಳ್ಳಿ ಗ್ರಾಮದ ರೈತರು, ಪಾದಯಾತ್ರೆ ನಿರತ ರೈತರಿಗೆ ಜ್ಯೂಸ್ ವಿತರಿಸಿದ್ರು.., ಅದೇ ರೀತಿ ಹಲವೆಡೆ ಜನರು ರೈತರಿಗೆ ನೀರಿನ ವ್ಯವಸ್ಥೆ ಮಾಡಿ, ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಿದ್ದು, ವಿಶೇಷ.
ಪಾದಯಾತ್ರೆ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್ಯಾಯಗಳ ವಿರುದ್ಧ ದಿಕ್ಕಾರ ಕೂಗಿದ ರೈತರು, ನಾಡಿಗೆ ಬೆಳಕು ಕೊಟ್ಟೆವು ನಾವು ಕತ್ತಲೆಯಲ್ಲಿದ್ದೇವೆ. ನಮಗೆ ಬೆಳಕು ಕೊಡಿ ಎಂದು ಮುಳುಗಡೆ ಸಂತ್ರಸ್ಥರು ಆಗ್ರಹಿಸಿದ್ದಾರೆ.
ಯಾವ ಆಣೆಕಟ್ಟು ಕಟ್ಟಿ ನಮ್ಮ ಬದುಕು ಮುಳುಗಿಸಿದರೋ ಅಲ್ಲಿಂದಲೇ ನ್ಯಾಯ ಪಡೆದುಕೊಳ್ಳೋಣ ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದ್ದು, ಪಾದಯಾತ್ರೆ ವೇಳೆ ಸಾವಿರಾರು ರೈತರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ತೀ.ನಾ ಶ್ರೀನಿವಾಸ್, ದಿನೇಶ್ ಶಿರವಾಳ,ವಿ.ಜಿ ಶ್ರೀಕರ್, ಶಿವಾನಂದ ಕುಗ್ವೆ, ಹೊಯ್ಸಳ ,ಜಿ.ಟಿ.ಸತ್ಯನಾರಾಯಣ, ,ನಾಗರಾಜ್ ಎಂ.ಡಿ ಪ್ರದೀಪ್ ಹೆಬ್ಬೂರು,ಕೆ.ಹೂವಪ್ಪ ಸೇರಿದಂತೆ ಹಲವರಿದ್ದರು.
“ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಇಂದು ನಿನ್ನೆಯದಲ್ಲ, ಆರು ದಶಕಗಳು ಕಳೆದರೂ ಯಾವುದೇ ನ್ಯಾಯ ಸಿಕ್ಕಿಲ್ಲ,ಅರಣ್ಯ ಕಾನೂನುಗಳ ಮೂಲಕ ಸಂತ್ರಸ್ಥರನ್ನು ಕತ್ತು ಹಿಸುಕಲಾಗುತ್ತಿದೆ.ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಈ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಚಲೋ ನಡೆಸಲಾಗುತ್ತದೆ. ನಾವು ಎಲ್ಲಿ ಮುಳುಗಡೆ ಆದೆವೋ ಅಲ್ಲಿಂದಲೇ ನ್ಯಾಯ ಪಡೆಯುತ್ತೇವೆ.”
- ದಿನೇಶ್ ಶಿರಿವಾಳ : ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ ಅಧ್ಯಕ್ಷರು