ಶಿವಮೊಗ್ಗ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ, ಗಾಂಜಾ ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ನಗರ ಹೊರವಲಯದ ಕುವೆಂಪು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸವನಗುಡಿಯ ಟಿ.ಭರತ್(27) ಮತ್ತು ರಾಗಿಗುಡ್ಡದ ಎಸ್.ನರಸಿಂಹ(39) ಬಂಧಿತರು. ಇವರಿಂದ 28 ಸಾವಿರ ರೂ. ಮೌಲ್ಯದ ಗಾಂಜಾ ಮತ್ತು 400 ರೂ. ನಗದು ಜಪ್ತಿ ಮಾಡಿದ್ದಾರೆ. ಕುವೆಂಪು ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧಿಸಿದ್ದಾರೆ.
ಕುಂಸಿ ಪೊಲೀಸರ ಕಾರ್ಯಾಚರಣೆ- ಓರ್ವ ಬಂಧನ:
ಆಯನೂರು ಸಮೀಪದ ಹಾರನಹಳ್ಳಿ ಮುಖ್ಯರಸ್ತೆಯಲ್ಲಿರುವ ನಾಗರಬಾವಿ ಬಸ್ ನಿಲ್ದಾಣ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮದ ಚಂದ್ರ ನಾಯಕ್ ಬಂಧಿತ ಆರೋಪಿ.
ಈತನಿಂದ 15 ಸಾವಿರ ರೂ. ಮೌಲ್ಯದ 640 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.