ಶಿವಮೊಗ್ಗ : ಲಿಂಗನಮಕ್ಕಿ ಚಲೋ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮನವಿ ನಂತರವೂ ಭೂ ಹಕ್ಕಿನ ಹೋರಾಟವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ.
ಶಿವಮೊಗ್ಗ ಜಿಲ್ಲಾ ರೈತರ, ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ನೇತೃತ್ವದಲ್ಲಿ ಅ.21 ರಿಂದ ಸಾಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ಸರ್ಕಾರ ಮಲೆನಾಡಿನ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಅದೇ ರೀತಿ ಸೋತ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸಹ ಸೋತ ನಂತರ ಕಾಣೆಯಾಗಿದ್ದಾರೆ. ರೈತರ ಪ್ರತಿಭಟನೆ 7 ದಿನದಿಂದ ನಡೆಯುತ್ತಿದ್ದರೂ ಅವರು ಸಹ ಬಂದಿಲ್ಲ. ಜಿಲ್ಲೆಗೆ ಅತಿಥಿ ಕಲಾವಿದರಂತೆ ರಾಗಿದ್ದಾರೆ. ಚುನಾವಣೆಗೆ ಬಂದಂತೆ ಒಟ್ಟಾಗಿ ರೈತ ಪರ ಹೋರಾಟಕ್ಕೂ ಬರಲಿ. ಆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಚ್ಚರಿಸೋಣ.
- ತೀ.ನಾ. ಶ್ರೀನಿವಾಸ್ : ರೈತ ಮುಖಂಡರು.
ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು, ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸಾಗರದಲ್ಲಿ ರೈತರು ಹೋರಾಟ ಆರಂಭಿಸಿದ್ದರು. ಮೊದಲ ಮೂರು ದಿನಗಳ ಕಾಲ ಎಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದ ರೈತರು, ನಂತರದ 2 ದಿನ ಸಾಗರದಿಂದ ಲಿಂಗನಮಕ್ಕಿವರೆಗೆ ಪಾದಯಾತ್ರೆ ಕೂಡ ನಡೆಸಿದ್ದರು. ಈ ವೇಳೆ ಸಚಿವ ಮಧು ಬಂಗಾರಪ್ಪ ರೈತರನ್ನು ಭೇಟಿ ಮಾಡಿ, ಶೀಘ್ರದಲ್ಲೇ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಹೊರತಾಗಿಯೂ ರೈತರು, ಭೂ ಹಕ್ಕಿನ ಹೋರಾಟದ ತೀವ್ರತೆಯನ್ನ ಹಾಗೇ ಮುಂದುವರೆಸಲು ನಿರ್ಧರಿಸಿದ್ದು, ಸಾಗರ ಎಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಪ್ರತಿನಿತ್ಯ ಹತ್ತಾರು ಜನ ರೈತರು ಎಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲೆನಾಡಿನ ರೈತರ ಸಮಸ್ಯೆ ಈಡೇರಿಸುವಲ್ಲಿ ವಿಫಲವಾಗಿವೆ.ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಅರಣ್ಯ ಇಲಾಖೆ ನೋಟೀಸ್ ನೀಡುತ್ತಿದೆ. 64 ವರ್ಷಗಳು ಕಳೆದರೂ ನ್ಯಾಯ ಒದಗಿಸದೇ ಸರ್ಕಾರಗಳು ಕಾಲಹರಣ ನಡೆಸುತ್ತಿದ್ದಾರೆ. ಹಾಗಾಗಿ ನಮ್ಮ ಜಾಗ ನಮಗೆ ಕೊಡಿ ಎಂದು ರೈತರು ಒತ್ತಾಯಿಸಿದ್ದಾರೆ.