ಶಿವಮೊಗ್ಗ : ಭೂ ಹಕ್ಕಿನ ನ್ಯಾಯಕ್ಕಾಗಿ ಸಾಗರ ತಾಲೂಕಿನಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಆರಂಭಿಕ ಯಶಸ್ಸು ದೊರೆತಿದ್ದು, ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿ, ರೈತ ಹೋರಾಟಗಾರರನ್ನು ಸಭೆಗೆ ಆಹ್ವಾನಿಸಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಶಿಕ್ಷಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಉಪಸ್ಥಿತಿಯಲ್ಲಿ ಅಕ್ಟೋಬರ್ 30 ರ ಸಂಜೆ 4 ಗಂಟೆಗೆ ವಿಧಾನಸೌದ ಕೊಠಡಿ ಸಂಖ್ಯೆ 313 ರಲ್ಲಿ ಸಭೆ ನಿಗಧಿಯಾಗಿದ್ದು, ರೈತ ಮುಖಂಡರನ್ನು ಸಭೆ ಅಹ್ವಾನಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿಯಿಂದ ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆಯ ರೈತ ಮುಖಂಡರಿಗೆ ಸಭೆಗೆ ಅಹ್ವಾನ ಬಂದಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯ ಮೂಲಕವೇ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಸುಪ್ರೀ ಕೋರ್ಟ್ ಗೆ ವಕೀಲರ ನೇಮಕ, ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆ ಈಡೇರುತ್ತವೆ ಎಂಬ ನಿರೀಕ್ಷೆಯಲ್ಲಿ ರೈತರಿದ್ದು, ನಾಳೆಯ ಸಭೆಯ ಮೇಲೆ ರೈತರ ದೃಷ್ಟಿ ನೆಟ್ಟಿದೆ.
ಸಿಎಂ ಮಧ್ಯಪ್ರವೇಶಕ್ಕೆ ಮುಳುಗಡೆ ಸಂತ್ರಸ್ತರ ಆಗ್ರಹ:
ಮುಳುಗಡೆ ಸಂತ್ರಸ್ತರ ಸಮಸ್ಯೆ ಇತ್ಯರ್ಥಕ್ಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಮುಳುಗಡೆ ಸಂತ್ರಸ್ಥರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಆಗ್ರಹಿಸಿದೆ.
ಸಾಗರ ಎಸಿ ಕಚೇರಿ ಆವರಣದಲ್ಲಿ ಕಳೆದ 9 ದಿನದಿಂದ ಧರಣಿ ನಡೆಸುತ್ತಿರುವ ಹೋರಾಟಗಾರರು, ಇಂದು ಸಮಾಲೋಚನಾ ಸಭೆ ನಡೆಸಿ, ಈ ನಿರ್ಣಯ ಕೈಗೊಂಡಿದ್ದಾರೆ.
“ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಕೇಂದ್ರ ಸರ್ಕಾರ ಮಲೆನಾಡಿನ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಅರಣ್ಯ ಹಕ್ಕು ಕಾಯಿದೆ ಅರ್ಜಿಗಳನ್ನು ಅಂದಿನ ಯಡಿಯೂರಪ್ಪ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ. ನಮ್ಮ ಹೋರಾಟ ವ್ಯಕ್ತಿಗಳ ವಿರುದ್ಧ ಅಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧವಾಗಿದೆ”
-ತೀ.ನಾ. ಶ್ರೀನಿವಾಸ್, ರೈತ ಮುಖಂಡರು.
ಕಳೆದ ಮಾರ್ಚ್ ನಲ್ಲಿ ಶಿವಮೊಗ್ಗ ಡಿಸಿ ಸರ್ಕಾರಕ್ಕೆ ಟಾಸ್ಕ್‌ಫೋರ್ಸ್ ರಚನೆ ಮಾಡಲು ಶಿಫಾರಸು ಮಾಡಿದ್ದಾರೆ. ಮಲೆನಾಡಿನ ಶಾಸಕರ ಸಮ್ಮುಖದಲ್ಲಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರೇ ಸಭೆ ನಡೆಸಿದ್ದಾರೆ. ಅಂದಿನ ಸಭೆಯಲ್ಲಿ ಮಾಡಿದ್ದ ಶಿಫಾರಸು ಜಾರಿಯಾಗಬೇಕು. ಅದಕ್ಕೆ ಸಿಎಂ ಸಿದ್ದರಾಮಯ್ಯ ಮಧ್ಯಪ್ರದೇಶ ಮಾಡಬೇಕು. ಉನ್ನತ ಸಮಿತಿ ರಚನೆ ಮಾಡುವ ತನಕ ಹೋರಾಟ ಮುಂದುವರಿಸಲು ರೈತ ಮುಖಂಡರು ನಿರ್ಧರಿಸಿದ್ದಾರೆ.
ಸಭೆಯಲ್ಲಿ ರೈತ ಮುಖಂಡರಾದ ದಿನೇಶ್ ಶಿರವಾಳ, ಶಿವಾನಂದ ಕುಗ್ವೆ, ಜಿ.ಟಿ.ಸತ್ಯನಾರಾಯಣ, ರಾಮಚಂದ್ರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.