ಶಿವಮೊಗ್ಗ : ದೇಶದಲ್ಲಿ ಬಡ ರೈತರ ರಕ್ತ ಹೀರುತ್ತಿರುವ ಅರಣ್ಯ ಮತ್ತು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಗರದಲ್ಲೂ ಆಶ್ರಯ ನಿವೇಶನವೊಂದನ್ನು ಯಾರೋ ವಕ್ಫ್ ಬೋರ್ಡ್ ಗೆ ಬರೆದು ಕೊಟ್ಟಿದ್ದು, ಅಲ್ಲಿ ಮಸೀದಿ ನಿರ್ಮಿಸಲು ಹೊರಟಿದ್ದಾರೆ. ಗಣಪತಿ ಕೆರೆಯ ಜಾಗವನ್ನೂ ವಕ್ಫ್ ಎಂದಿತ್ತು. ಅದನ್ನು ನಾನೇ ಸಮರ್ಪಕವಾಗಿ ತಿರಸ್ಕರಿಸಿದೆ ಎಂದಿದ್ದಾರೆ.
ಸಚಿವ ಜಮೀರ್ ಅಹ್ಮದ್ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ವಕ್ಫ್ ಕಾಯ್ದೆಯೇ ಸರಿಯಿಲ್ಲದ ಕಾರಣ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಹೊರಟಿದೆ. ಯಾರ ಸ್ವಾಧೀನದಲ್ಲಿ ಇರುತ್ತದೆ ಅದು ರೈತರ ಆಸ್ತಿಯಾಗಬೇಕು ಎಂದು ಆಗ್ರಹಿಸಿದರು.
“ಜಮೀರ್ ಅಹ್ಮದ್ ಒಂದು ಇಂಚು ಸಹ ವಕ್ಫ್ ಬೋರ್ಡ್ ಆಸ್ತಿ ಬಿಡೊಲ್ಲ ಎಂದಿದ್ದಾರೆ. ಆ ಹೇಳಿಕೆ ಹಿಂಪಡೆಯಬೇಕು. ಅವರ ಆಸ್ತಿ ಅವರು ಇಟ್ಟುಕೊಳ್ಳಲಿ, ತಿದ್ದುಪಡಿಯ ಮೂಲಕವೇ ವಕ್ಫ್ ಮತ್ತು ಅರಣ್ಯ ಇಲಾಖೆ ತಿದ್ದುಪಡಿಯಾಗಬೇಕಿದೆ.”
– ಹರತಾಳು ಹಾಲಪ್ಪ, ಮಾಜಿ ಸಚಿವರು.
ಶಾಂತಿ ಕದಡಲು ಯತ್ನಿಸುತ್ತಿರುವ ಸಚಿವ ಜಮೀರ್ ಅವರ ಪ್ರಯತ್ನ ಕೈಗೂಡಲ್ಲ. ಎರಡು ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಿದೆ. ಒಂದು ವಕ್ಫ್ ಮತ್ತೊಂದು ಅರಣ್ಯ ಕಾಯ್ದೆ. ಡೀಮ್ಡ್ ಫಾರೆಸ್ಟ್, ಪ್ರೊಟೆಸ್ಟೆಡ್ ಫಾರೆಸ್ಟ್ ಎಂದು ಅರಣ್ಯ ಹೇಳಿದರೆ ಮುಗೀತು. ನೋಟೀಸ್, ಮತ್ತೊಂದು ಮಗದೊಂದಿಗಾಗಿ ಹೋರಾಡಬೇಕಾಗುತ್ತದೆ. ಅದೇ ರೀತಿ ವಕ್ಫ್ ಬೋರ್ಡ್ ಸಹ ಇದು ನಮ್ಮ ಜಮೀನು ಎಂದು ಹೇಳಿಕೊಂಡರೆ ಮುಗೀತು. ಅದನ್ನ ಈ ದೇಶದ ಕೋರ್ಟ್ ನಲ್ಲಿ ಪ್ರಶ್ನಿಸುವಂತಿಲ್ಲ. ಅವರದ್ದೇ ಆದ ವಕ್ಫ್ ಟ್ರಿಬ್ಯೂನಲ್ ಗೆ ಹೋಗಿ ಫೈಟ್ ಮಾಡಬೇಕಿದೆ. ಅವರದ್ದೇ ಹುಟ್ಟು, ಅವರದ್ದೇ ದೋಣಿ ಎಂಬಂತೆ ವಕ್ಫ್ ವರ್ತಿಸುತ್ತದೆ ಎಂದು ದೂರಿದ್ದಾರೆ.