Malenadu Mitra
ರಾಜ್ಯ ಶಿವಮೊಗ್ಗ

“ಹಸೆ ಚಿತ್ತಾರ”ಕ್ಕೆ ರಾಜ್ಯೋತ್ಸವದ ಗೌರವ : ಕಲಾವಿದ ಸಿರಿವಂತೆ ಚಂದ್ರಶೇಖರ್ ಗೆ ಪ್ರಶಸ್ತಿ ಘೋಷಣೆ.

ಶಿವಮೊಗ್ಗ : 2024 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆಯ ಒಬ್ಬರಿಗೆ ಪ್ರಶಸ್ತಿ ದೊರೆತಿದೆ.
ಕರಕುಶಲ ವಿಭಾಗದಲ್ಲಿ ಹಸೆ ಚಿತ್ತಾರ ಕಲಾವಿದ ಸಾಗರ ತಾಲೂಕಿನ ಸಿರಿವಂತೆಯ ಚಂದ್ರಶೇಖರ್‌ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

69 ಪ್ರಶಸ್ತಿ ಪ್ರಕಟ:

ಸಂಘ-ಸಂಸ್ಥೆಗಳು ಮತ್ತು ವೈಯಕ್ತಿಕ ವಿಭಾಗದಲ್ಲಿ ಒಟ್ಟು 69 ಪ್ರಶಸ್ತಿಗಳನ್ನು ಈ ಬಾರಿ ಘೋಷಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಒಂದು ಪ್ರಶಸ್ತಿ ಮಾತ್ರ ದೊರಕಿದೆ.

“ರಾಜ್ಯೋತ್ಸವ ಪ್ರಶಸ್ತಿ ಬಂದಿರುವ ವಿಷಯ ತಿಳಿದು ಖುಷಿಯಾಗುತ್ತಿದೆ. ಕಳೆದ 25 ವರ್ಷದಿಂದ ತಪಸ್ಸಿನಂತೆ ಹಸೆ ಚಿತ್ತಾರ ಬಿಡಿಸಿದ್ದೇನೆ. ಅರ್ಹತೆ ಗುರುತಿಸಿ ಸರ್ಕಾರ ಪ್ರಶಸ್ತಿ ಘೋಷಿಸಿರುವುದು ಖುಷಿ ತಂದಿದೆ.”
               – ಸಿರಿವಂತೆ ಚಂದ್ರಶೇಖರ್,                                             ಚಿತ್ತಾರ ಕಲಾವಿದರು.

ಚಂದ್ರಶೇಖರ್ ರಿಂದ ಹಸೆ ಚಿತ್ತಾರದಲ್ಲಿ ನವೀನ ಪ್ರಯೋಗ:

ಸಿರಿವಂತೆ ಚಂದ್ರಶೇಖರ್‌ ಅವರು ಕಳೆದ ಎರಡೂವರೆ ದಶಕದಿಂದ ಹಸೆ ಚಿತ್ತಾರಗಳನ್ನು ರಚಿಸಿ ರಾಜ್ಯಾದ್ಯಂತ ಜನಪ್ರಿಯಗೊಳಿಸಿದ್ದಾರೆ. ವಿದ್ಯಾರ್ಥಿಗಳು, ಕಲೆಯ ಆಸಕ್ತರು ಇವರಿಂದ ಹಸೆ ಚಿತ್ತಾರ ಕಲಿತು ಮತ್ತಷ್ಟು ಕಡೆ ಪ್ರಚುರಪಡಿಸುತ್ತಿದ್ದಾರೆ.

ಹಸೆ ಚಿತ್ತಾರದ ಸಂಪ್ರದಾಯಿಕ ಮೂಲಾಂಶಗಳನ್ನು ಉಳಿಸಿಕೊಂಡು ಆಧುನಿಕ ಸಂದರ್ಭದಲ್ಲಿ ಪ್ರಾಕೃತಿಕ ಹಾಗೂ ಆಧುನಿಕ ಬಣ್ಣವನ್ನು ಬಳಸಿ, ಕಲೆಯನ್ನು ಉಳಿಸುವ ಕೆಲಸ ಚಂದ್ರಶೇಖರ್ ಮಾಡಿದ್ದಾರೆ. ಗೋಡೆಯ ಮೇಲೆ ಬರೆಯುತ್ತಿದ್ದ ಚಿತ್ತಾರವನ್ನು ಕಾಗದ, ಬಟ್ಟೆ, ಗಾಜು ಮತ್ತು ಬಿದಿರಿನ ತಡಿಕೆಗಳ ಮೇಲೆ ಚಿತ್ರಿಸುವ ಕೆಲಸ ಮಾಡಿದ್ದಾರೆ.

ಚಿತ್ತಾರ ಕಲೆಯ ಉಳಿವಿಗಾಗಿ 100ಕ್ಕೂ ಹೆಚ್ಚಿನ ಕಲಾವಿದರುಗಳಿಗೆ ತರಭೇತಿ ಮತ್ತು ಅಧ್ಯಯನ ಶಿಬಿರ ನಡೆಸಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದಲ್ಲಿ ಮಾತ್ರವಲ್ಲದೇ, ಕಲ್ಕತ್ತ, ಮಧುರೈ, ಹೈದ್ರಾಬಾದ್ ಕೊಚ್ಚಿನ್ ನಲ್ಲಿ ಕೂಡ ಚಿತ್ತಾರ ಕಲೆಯ ಪ್ರದರ್ಶನ ಮಾಡಿದ್ದಾರೆ.
ಹಸೆ ಚಿತ್ತಾರ ಅಷ್ಟೇ ಅಲ್ಲದೇ, ಪಾರಂಪರಿಕ ಭತ್ತದ ತೋರಣ ಮತ್ತಿತರ ಕಲಾಕೃತಿ, ವಿವಿಧ ಮಾದರಿಯ ಗೂಡುಗಳು, ಭೂಮಿ ಹುಣ್ಣಿಮೆ ಬುಟ್ಟಿ ಸಂರಕ್ಷಿಸುವ ಕೆಲಸ ಸಹ ಮಾಡಿದ್ದಾರೆ.


2008 ರಲ್ಲಿ ಜಪಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ, 2009 ರಲ್ಲಿ ದುಬೈನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕೂಡ ಭಾಗಿಯಾಗಿ, ಚಿತ್ತಾರ ಕಲೆ ಹಾಗೂ ಪಾರಂಪರಿಕ ಭತ್ತದ ಕಲಾಕೃತಿಗಳನ್ನು ಪ್ರದರ್ಶಿಸಿರುವುದು ವಿಶೇಷ.
ಹಸೆ ಚಿತ್ತಾರದಲ್ಲಿ ಹಲವು ನವೀನ ಪ್ರಯೋಗಗಳ ಮೂಲಕ ದೇಶ ಹಾಗೂ ರಾಜ್ಯದ ಗಮನ ಸೆಳೆದಿರುವ ಸಿರಿವಂತೆ ಚಂದ್ರಶೇಖರ್ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ಹಸೆ ಚಿತ್ತಾರ ಕಲೆಯ ಅನನ್ಯತೆಗೆ ಸಂದ ಗೌರವವಾಗಿದೆ.

Ad Widget

Related posts

9ನೇ ದಿನಕ್ಕೆ ಕಾಲಿಟ್ಟ ಭೂ ಹಕ್ಕಿನ ಹೋರಾಟ : ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೀಟಿಂಗ್ ಫಿಕ್ಸ್

Malenadu Mirror Desk

ಮೋದಿ ಸರಕಾರ ದೇಶ ಭಕ್ತಿ ಬೆಳೆಸಿದೆ: ಸಂಸದ ಬಿ.ವೈ. ರಾಘವೇಂದ್ರ

Malenadu Mirror Desk

ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲದ ಉಪ್ಪಾರ ಸಂಘದ ಸಮುದಾಯ ಭವನದ ಉದ್ಘಾಟನೆ ಮಾಡಬಾರದು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.