ಶಿವಮೊಗ್ಗ : ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಬಾಲ ಹಿಡಿಯುತ್ತಾ ಹೋದರೆ, ಸಿಎಂ ಸ್ಥಾನ ಕಳೆದುಕೊಳ್ಳಬೇಕಾಗುತ್ತೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರ ಭಕ್ತರ ಬಳಗದ ಸಂಚಾಲಕರೂ ಆದ ಕೆ.ಎಸ್.ಈಶ್ವರಪ್ಪ, ವಕ್ಫ್ ವಿಚಾರದಲ್ಲಿ ಮುಸ್ಲಿಂ ನಾಯಕರು ತೆಗೆದುಕೊಳ್ಳುತ್ತಿರುವ ನಿರ್ಧಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಅವರಿಗೆ ಕೇಡುಗಾಲ ಬಂದಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬರೆದು ಹಿಂದೂ ಸಮೂದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ವಕ್ಫ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನ್ನ ಹಠಮಾರಿ ಧೋರಣೆ ಮುಂದುವರೆಸಿದೆ. ರಾಜ್ಯವನ್ನೇ ಇಸ್ಲಾಮೀಕರಣ ಮಾಡಲು ಹೊರಟಿದೆ. ಸುಮಾರು 1.10 ಲಕ್ಷ ಎಕರೆ ಭೂಮಿ ವಕ್ಫ್ ಆಸ್ತಿಯಾಗಿದೆ. ಎಲ್ಲಾ ಜಿಲ್ಲೆಯಲ್ಲೂ ವಿವಾದ ತಲೆ ಎತ್ತಿದ್ದು, ರೈತರ ಜಮೀನು, ಸಾಧು- ಸಂತರ ಮಠ, ದೇವಸ್ಥಾನ, ಸರ್ಕಾರಿ ಶಾಲೆಗಳು ಇದರಲ್ಲಿ ಸೇರಿವೆ ಎಂದರು.
ವಕ್ಫ್ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕ್ರಮ ಕೈಗೊಳ್ಳುತ್ತಾರೆ ಎನ್ನುತ್ತಾರೆ. ಅದಷ್ಟೇ ಸಾಲದು, ರೈತರ ಪಹಣಿಗಳಲ್ಲಿ ವಕ್ಫ್ ಹೆಸರು ಇದ್ದು, ಅದನ್ನು ಕೂಡಲೇ ರದ್ದು ಪಡಿಸಬೇಕು. ಈ ವಿಚಾರದಲ್ಲಿ ಸಿಎಂ ಕೂಡಲೇ ಎಚ್ಚೇತ್ತುಕೊಳ್ಳಬೇಕು. ಇಲ್ಲವಾದರೇ ಸಾಧುಸಂತರ ಮುಂದಾಳತ್ವದಲ್ಲೇ ರಾಜ್ಯದಲ್ಲಿ ರಕ್ತಕ್ರಾಂತಿಯಾಗುತ್ತದೆ ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
“ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ. ಇದಕ್ಕಾಗಿ ಸಮಿತಿಯನ್ನು ಕೂಡ ರಚಿಸಲಾಗಿದೆ. ಆದಷ್ಟು ಬೇಗ ಕಾಯ್ದೆ ಜಾರಿಗೆ ತರಬೇಕು. ವಕ್ಫ್ ಶಬ್ಧವೇ ಕೊನೆಗೊಳ್ಳಬೇಕು.”
– ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಮಾಜಿ ಸಿಎಂ ಬೊಮ್ಮಾಯಿ ಕೂಡ ಮೇಲಿಂದ ಇಳಿದು ಬಂದವರಲ್ಲ. ಚುನಾವಣಾ ಸಮಯದಲ್ಲಿ ಮತಗಳನ್ನು ಪಡೆಯಲು ಈ ರೀತಿ ಮಾತನಾಡಬಾರದು ಎಂದ ಅವರು, ಈಗಾಗಲೇ ಸಾಧು-ಸಂತರೇ ಎಚ್ಚೇತ್ತಿದ್ದು, ನಾಳೆಯಿಂದಲೇ ವಿವಿಧ ಸ್ವಾಮೀಜಿಗಳ ನೇತೃತ್ವದ ತಂಡ ಪ್ರವಾಸ ಕೈಗೊಳ್ಳಲಿದೆ. ಆ ಬಳಿಕ ಹೋರಾಟದ ರೂಪುರೇಷೆ ಸಿದ್ಧವಾಗಲಿದೆ. ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಈ ರೀತಿ ಆಗಿದೆ ಅದನ್ನು ನೋಡಲು ನಾನೂ ಕೂಡ ಪ್ರವಾಸ ಮಾಡುತ್ತಿದ್ದೇನೆ. ನಂತರ ಚರ್ಚಿಸಿ, ಸರ್ಕಾರ ನಿರ್ಧಾರ ಬದಲಿಸದಿದ್ರೇ ಮುಂದಿನ ಹೋರಾಟ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.