ಶಿವಮೊಗ್ಗ : ಆರ್ ಎಸ್ಎಸ್ ಬ್ಯಾನ್ ಮಾಡಲು ಸ್ವರ್ಗದಲ್ಲಿರುವ ಇಂದಿರಾಗಾಂಧಿ, ನೆಹರು ಕೈಯಲ್ಲಿ ಆಗಿಲ್ಲ. ಇನ್ನೂ ನೀವು ಯಾವ ಲೆಕ್ಕ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ-ಆರ್‌ಎಸ್ಎಸ್ ವಿಷಕಾರಿ ಹಾವು, ಅದನ್ನು ಕೊಲ್ಲಿ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇವೆರೆಡು ಇಲ್ಲದಿದ್ದರೆ ದೇಶ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ. ದೇಶದ ಜನ ಆರ್‌ಎಸ್ಎಸ್ ಅನ್ನು ಒಪ್ಪಿದ್ದಾರೆ. ಹಿಂದುತ್ವ ಒಪ್ಪಿ ಸ್ವಯಂ ಸೇವಕನನ್ನೆ ಪ್ರಧಾನಿಯನ್ನಾಗಿ ಜನ ಮಾಡಿದ್ದಾರೆ. ಖರ್ಗೆ ಅವರಿಗೆ ಅಧಿಕಾರದ ದಾಹ ಹೆಚ್ಚಾದ ಕಾರಣ ಇಂತಹ ಹೇಳಿಕೆ ನೀಡಿದ್ದಾರೆ. ಹಿರಿಯ ರಾಜಕಾರಣಿ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಕೂಡಲೇ ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪ್ರೇರಣೆಯಿಂದ ಪೊಲೀಸರು ನನ್ನ ಮೇಲೆ ಸುಮೊಟೊ ಕೇಸ್ ದಾಖಲಿಸಿದ್ದಾರೆ. ಕಾಂಗ್ರೆಸ್‌ಗೆ ಮಾನ, ಮರ್ಯಾದೆ ಏನೂ ಇಲ್ಲ. ವಕ್ಪ್ ಆಸ್ತಿ ಬಗ್ಗೆ ಕಾಂಗ್ರೆಸ್ ಖಂಡನೆ ಮಾಡಲಿಲ್ಲ. ಅಂಬೇಡ್ಕರ್ ಬಗ್ಗೆ ಮಾತನಾಡಿದ್ದಕ್ಕೆ ಖಂಡನೆ ಮಾಡಲಿಲ್ಲ. ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕೊಡ್ತೀವಿ ಅಂದ್ರು. ಅದರ ಬಗ್ಗೆ ಕಾಂಗ್ರೆಸ್ ಖಂಡನೆ ಮಾಡಲಿಲ್ಲ. ಖರ್ಗೆ ಅವರು ಈ ಬಗ್ಗೆ ಮಾತನಾಡಲಿಲ್ಲ. ನಾನು ಮುಸ್ಲಿಂರನ್ನು ಕೊಲ್ಲುವ ಪರಿಸ್ಥಿತಿ ಬರುತ್ತದೆ ಅಂದೆ ನನ್ನ ಮೇಲೆ ಪೊಲೀಸರು ಕೇಸ್ ಹಾಕಿದ್ರು. ಈಗ ಖರ್ಗೆ ಅವರು ನೇರವಾಗಿ ಆರ್ ಎಸ್ ಎಸ್ ಕೊಲ್ಲಿ ನೇರವಾಗಿ ಕೊಲ್ಲಿ ಅಂದಿದ್ದಾರೆ. ಪೊಲೀಸರು ಅವರ ಮೇಲೆ ಕೇಸ್ ಹಾಕಬೇಕಲ್ವಾ…? ನನ್ನ ಮೇಲೆ ಕೇಸ್ ಹಾಕ್ತೀರಾ, ಈಗ ಹಾಕಿ ಖರ್ಗೆ ಮೇಲೆ ಕೇಸ್ ಎಂದು ಒತ್ತಾಯಿಸಿದ್ದಾರೆ.
‘ಈ ಹಿಂದೆ ಮಾಡಿದ್ದ 40% ಆರೋಪ ಸುಳ್ಳು ಎಂದು ಲೋಕಾಯುಕ್ತ ವರದಿ ಕೊಟ್ಟಿದೆ. ಈ ಹಿಂದೆ ನನ್ನ ಮೇಲೆ ಆರೋಪ ಬಂದಾಗ ನಾನು ರಾಜೀನಾಮೆ ಬಿಸಾಕಿದ್ದೆ. ನಂತರ ತನಿಖೆ ಆಯ್ತು, ಕ್ಲಿನ್ ಚಿಟ್ ಕೂಡ ಬಂತು. ನಾನು ಇವತ್ತು ಶುಭ್ರ. ನನ್ನ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ಜೊತೆಗೆ ಯಾವುದೇ ಪೋಕ್ಸೋ ಕೇಸ್ ಇಲ್ಲ. ಎಲ್ಲಾ ರಾಜಕಾರಣಿಗಳು ಒಂದೇ ಎಂದುಕೊಳ್ಳಬೇಡಿ. ಈ ಹಿಂದೆ ಕಾಂಗ್ರೆಸ್ ಏಜೆಂಟ್ ಮಾಡಿದ ಆರೋಪ ಸುಳ್ಳು ಎಂದು ಗೊತ್ತಾಗಿದೆ. ಲೋಕಾಯುಕ್ತರು ಹೇಳಿದ ಮೇಲೂ ಸಿಎಂ, ಡಿಸಿಎಂ ಕ್ಷಮೆ ಕೇಳಲಿಲ್ಲ. ತಮ್ಮ ಆರೋಪ ಸುಳ್ಳು ಅಂತಾ ಗೊತ್ತಾದ ಮೇಲೂ ಕ್ಷಮೆ ಕೇಳಿಲ್ಲ. ಕೂಡಲೇ ಕ್ಷಮೆ ಕೇಳಬೇಕು.’
– ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಕಾಂಗ್ರೆಸ್ ಜಾತಿಗಣತಿಯನ್ನು ಚುನಾವಣೆ ಟೂಲ್‌ಕಿಟ್ ಮಾಡಿಕೊಂಡು, ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಚರ್ಚೆಯಾಗಲಿ. ಜಾತಿಗಣತಿ ಜಾರಿಗೆ ತಂದ ನಂತರ ಅಹಿಂದ ಸಮಾವೇಶ ಮಾಡಲಿ. ಅಧಿಕಾರಕ್ಕೆ ಮಾತ್ರ ಹಿಂದುಳಿದವರು ಬೇಕೆ. ಸಂಪುಟದಲ್ಲೆ ನಿಮಗೆ ಜಾರಿಗೆ ತರಲು ಆಗಿಲ್ಲ. ಜೈಲಿಗೆ ಹೋದ ನಂತರ, ಸಿಎಂ ಸ್ಥಾನ ಕಳೆದುಕೊಂಡ ನಂತರ ಜಾತಿಗಣತಿ ಜಾರಿಗೆ ತರಬೇಕಿತ್ತು ಎಂದು ಅಂದುಕೊಳ್ಳಬೇಡಿ ಎಂದು ಟೀಕಿಸಿದ್ದಾರೆ.
ಇನ್ನು ನಮ್ಮ ನಿರೀಕ್ಷೆಗೆ ಮೀರಿ ರಾಜ್ಯದಲ್ಲಿ ಬ್ರಿಗೇಡ್ ಗೆ ಬೆಂಬಲ ಸಿಗ್ತಿದೆ. ಕ್ರಾಂತಿವೀರ ಬ್ರಿಗೇಡ್ ಅಂತಾ ನಾಮಕರಣ ಮಾಡಿದ್ದೇವೆ. ಫೆ.4 ರಂದು ರಥ ಸಪ್ತಮಿಯ ದಿನ ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆಯಾಗಲಿದೆ. ಒಂದು ಸಾವಿರ ಸಾಧು ಸಂತರು ಭಾಗವಹಿಸಲಿದ್ದು, ಅವರ ಪಾದಪೂಜೆ ಮಾಡುವ ಮೂಲಕ ಬ್ರಿಗೇಡ್ ಉದ್ಘಾಟನೆ ಆಗುತ್ತದೆ ಎಂದ ಅವರು, ಡಿ.2 ರಂದು ಪದಾಧಿಕಾರಿಗಳ ಘೋಷಣೆ ಮಾಡ್ತೇವೆ. ವಕ್ಪ್ ಆಸ್ತಿ ಎನ್ನುವುದನ್ನು ಪಹಣಿಯಿಂದ ಕಿತ್ತು ಬಿಸಾಕಬೇಕು ಅದಕ್ಕಾಗಿ ಹೋರಾಟ ಮಾಡ್ತೀವಿ ಎಂದು ಈಶ್ವರಪ್ಪ ತಿಳಿಸಿದ್ದಾರೆ.