ಶಿವಮೊಗ್ಗ: ಸುಪ್ರೀಂ ಕೋರ್ಟ್ ನಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಭೂ ಹಕ್ಕಿನ ವಿಚಾರಣೆ ಆರಂಭಗೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ ಎಂದು ಕೆಪಿಸಿಸಿ ವಕ್ತಾರ ಬಿ.ಎ ರಮೇಶ್ ಹೆಗಡೆ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಡಿ.03 ರಂದು ವಿಚಾರಣೆ ಆರಂಭಿಸಿ ಕೇಂದ್ರ ಸರ್ಕಾರಕ್ಕೆ ಅಭಿಪ್ರಾಯ ತಿಳಿಸುವಂತೆ ನೋಟೀಸ್ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರ ನಾಡಿಗೆ ಬೆಳಕು ನೀಡಿದ ಮುಳುಗಡೆ ಸಂತ್ರಸ್ಥರ ಪರವಾಗಿ ಸೂಕ್ತ, ಸಕಾರಾತ್ಮಕ ನಿಲುವು ವ್ಯಕ್ತಪಡಿಸುವಂತೆ ಆಗ್ರಹಿಸಿದರು.
2017 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ,ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ನವರು ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ 9129 ಎಕರೆ ಭೂಮಿಗೆ ಡಿನೋಟಿಪಿಕೇಷನ್ ಹೊರಡಿಸಿದ್ದರು. ಆದರೆ 2019 ರಲ್ಲಿ ಗಿರೀಶ್ ಆಚಾರ್ ಎಂಬ ವ್ಯಕ್ತಿ ಡಿನೋಟಿಫಿಕೇಷನ್ ಆದೇಶ ಪ್ರಶ್ನಿಸಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರ ಸರ್ಕಾರದ ಅನುಮತಿ ಪಡೆದುಕೊಂಡಿಲ್ಲ ಎಂದು ಹೇಳಿತ್ತು.ನ್ಯಾಯಾಲಯದಲ್ಲಿ ಸಮರ್ಪಕ ವಾದ ಮಂಡಿಸದ ಪರಿಣಾಮ ರಾಜ್ಯ ಸರ್ಕಾರದ 53 ಡಿನೋಟಿಫಿಕೇಷನ್ ಆದೇಶವನ್ನು ನ್ಯಾಯಾಲಯ ವಜಾಗೊಳಿಸಿತ್ತು ಎಂದರು.
‘ಶರಾವತಿ ಸಂತ್ರಸ್ಥರ ಭೂ ಹಕ್ಕಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಹೀಗಾಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದ ಬಿ.ವೈ ರಾಘವೇಂದ್ರ ಹಾಗೂ ರಾಜ್ಯದಲ್ಲಿರುವ ಕೇಂದ್ರ ಸಚಿವರುಗಳ ಜವಾಬ್ದಾರಿ ಹೆಚ್ಚಿದೆ. ಕೇಂದ್ರ ಸರ್ಕಾರದ ಜೊತೆ ಚರ್ಚೆ ನಡೆಸಿ ಸಮಸ್ಯೆ ಮನವರಿಕೆ ಮಾಡಿಕೊಟ್ಟು, ಸಕರಾತ್ಮಕ ನಿರ್ಧಾರಕ್ಕೆ ಬರಲು ಒತ್ತಡ ಹೇರಬೇಕು.’
ಬಿ.ಎ.ರಮೇಶ್ ಹೆಗ್ಡೆ : ಕೆಪಿಸಿಸಿ ವಕ್ತಾರ
ಇದೀಗ ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ರಾಜ್ಯ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿ, ವಿಶೇಷ ವಕೀಲರನ್ನು ನೇಮಕ ಮಾಡಿತ್ತು. ಡಿ.03 ರಂದು ವಿಚಾರಣೆ ಆರಂಭವಾಗಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಜನವರಿ 20 ರಂದು ವಿಚಾರಣೆ ನಡೆಯಲಿದೆ. ಹೀಗಾಗಿ ಕೇಂದ್ರ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಹಾಗೂ ಸಕಾರಾತ್ಮಕ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಡಿ ಮಂಜುನಾಥ್, ರಮೇಶ್ ಇಕ್ಕೇರಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್,ವಕೀಲರಾದ ಎನ್.ಪಿ ಧರ್ಮರಾಜ್,ಪ್ರಮುಖರಾದ ರಾಜಪ್ಪ ಶೆಟ್ಟಿಕೆರೆ, ರಘುಪತಿ ಸೇರಿದಂತೆ ಪ್ರಮುಖರಿದ್ದರು.