ಶಿವಮೊಗ್ಗ: ಕೋಮುದ್ವೇಷ ಭಾಷಣ ಮಾಡಿ ಅಶಾಂತಿ ಸೃಷ್ಟಿಸಲು ಪ್ರಯತ್ನ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆಗ್ರಹಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ನಡೆಸಿದ ಎಸ್ಡಿಪಿಐ ಕಾರ್ಯಕರ್ತರು, ರಾಷ್ಟ್ರ ಭಕ್ತರ ಬಳಗದ ಸಂಚಾಲಕರು ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರವರು ಪದೇ ಪದೇ ಕೋಮು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯವನ್ನ ಗುರಿಯಾಗಿಟ್ಟುಕೊಂಡು, ಗೂಂಡಾಗಳು ಎಂದು ಕರೆಯುತ್ತಾರೆ. ಕೋಮು ವಿಷ ಬೀಜ ಬಿತ್ತಿ, ಅದರ ರಾಜಕೀಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇದೀಗ ಈಶ್ವರಪ್ಪ ಅವರು, ಮುಸ್ಲಿಂರು ಅನ್ನ ಹಾಕಿದ ಮನೆಗೆ ಕನ್ನ ಹಾಕುವವರು ಎಂದಿದ್ದಾರೆ. ಸಿಕ್ಕಸಿಕ್ಕಲ್ಲಿ ಮುಸ್ಲಿಂರಿಗೆ ನಾವು ಹೊಡೆದರೆ ಏನಾಗುತ್ತದೆ ಎಂದು ಕೇಳುತ್ತಾರೆ. ರಕ್ಷಣಾ ಇಲಾಖೆ ಇವರನ್ನು ಕೂಡಲೇ ಬಂಧಿಸಿ ಶಿವಮೊಗ್ಗದಲ್ಲಿ ಶಾಂತಿ ಕಾಪಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಕೆ.ಎಸ್.ಈಶ್ವರಪ್ಪರ ಕೋಮು ಪ್ರಚೋದನಾಕಾರಿ ಭಾಷಣದಿಂದ ನಗರದಲ್ಲಿ ವ್ಯಾಪಾರ-ವಹಿವಾಟು ಕುಂಠಿತವಾಗಿದೆ. ಜನಸಾಮಾನ್ಯರು ಜೀವನ ನಡೆಸಲು ಕಷ್ಟಪಡುವಂತಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು ಎಂದಿದ್ದಾರೆ.
ಪ್ರಮುಖರಾದ ಇಮ್ರಾನ್, ಇಸಾಕ್, ಹಬೀಬ್, ಸಜೀಲ್‌ಬೇಗ್, ಅನ್ವರ್‌ಖಾನ್ ಪ್ರತಿಭಟನೆಯಲ್ಲಿದ್ದರು.