ಶಿವಮೊಗ್ಗ: ಶರಾವತಿ ಸಂತ್ರಸ್ತರ ಸಮಸ್ಯೆ ಇತ್ಯರ್ಥ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಪಬ್ಲಿಸಿಟಿ ಸ್ಟಂಟ್ ನ ಹಳೆಯ ಚಾಳಿ ಬಿಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಲಹೆ ನೀಡಿದ್ದಾರೆ.
ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಸಂಸದ ರಾಘವೇಂದ್ರ ಅವರ ಚಲನವಲನ ನೋಡುತ್ತಿದ್ದೇನೆ. ಇಷ್ಟು ದಿನ ಎಲ್ಲಿ ಮಕಾಡೆ ಮಲಗಿದ್ದರೋ ಗೊತ್ತಿಲ್ಲ.
ಶರಾವತಿ ಸಂತ್ರಸ್ತರ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಪೀಲ್ ಹೋಗಲಿಲ್ಲ.. ಶರಾವತಿ ಸಂತ್ರಸ್ತರ ಬಗ್ಗೆ ಒಂದು ದಿನ ಮಾತನಾಡಲಿಲ್ಲ. ಅವರದ್ದೇ ಸರ್ಕಾರ ಇದ್ದಾಗ ಏನು ಮಾಡಲಿಲ್ಲ. ಸುಳ್ಳು ಹೇಳಿ ಕಾಲ ಕಳೆದರು ಎಂದು ಟೀಕಿಸಿದ್ದಾರೆ.
ಶರಾವತಿ ಸಂತ್ರಸ್ತರಿಗೆ ಮಾತು ಕೊಟ್ಟಂತೆ ಕಾಗೋಡು ತಿಮ್ಮಪ್ಪ ಅವರು ಕೆಲಸ ಮಾಡಿದ್ದರು. ಆದರೆ, ಕಾನೂನು ತೊಡಕು ಉಂಟಾಯಿತು. ಈಗ ನಮ್ಮ ಸರ್ಕಾರ ಬಂದ ಮೇಲೆ ಕನಿಷ್ಟ 10 ಸಭೆ ಶಿವಮೊಗ್ಗದಲ್ಲಿ ಮಾಡಿದ್ದೇವೆ. ಅದೇ ರೀತಿ ಬೆಂಗಳೂರಿನಲ್ಲಿ ಕೂಡ ಸಭೆ ಮಾಡಿ, ನಿರ್ಧಾರ ಕೈಗೊಂಡಿದ್ದೇವೆ. ಸುಪ್ರೀಂ ಗೆ ಅರ್ಜಿ ಹಾಕಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭಗೊಂಡಿದೆ. ಇದರಿಂದ ಶರಾವತಿ ಸಮಸ್ಯೆ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಭೂ ಹಕ್ಕಿನ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದರು.
ಯಡಿಯೂರಪ್ಪ ಸಿಎಂ ಇದ್ದಾಗ ರಾಘವೇಂದ್ರ ಅವರು ಒಮ್ಮೆ ಕೂಡ ಮಾತನಾಡಲಿಲ್ಲ. ಆದರೇ, ಈಗ ಅವರು ಓಡಾಡ್ತ ಇದ್ದಾರೆ. ಕೆಲಸ ಆಗೋ ಸಮಯದಲ್ಲಿ ಹೆಚ್ಚು ಓಡಾಡಿ, ಮುಖ ತೋರಿಸಿ, ಪೋಸ್ ಕೊಡದನ್ನ ಬಿಡಬೇಕು. ಇದು ಲೋ ಲೆವಲ್ ರಾಜಕಾರಣ. ಶರಾವತಿ ಸಂತ್ರಸ್ತರಿಗೆ ತೊಂದರೆ ಕೊಟ್ಟಿದ್ದೆ ಇದೇ ರಾಘವೇಂದ್ರ. ಅವರಿಗೆ ಬಡವರಿಗೆ ಅನುಕೂಲ ಆಗೋದು ಇಷ್ಟ ಇರಲಿಲ್ಲ. ಅಷ್ಟು ಬಾರಿ ಸಂಸದರಾದ್ರೂ ಒಮ್ಮೆ ಕೂಡ ನೀವು ಸರಿಯಾಗಿ ಮಾತನಾಡಲಿಲ್ಲ.. ಈಗ ಪಬ್ಲಿಸಿಟಿ ಸ್ಟಂಟ್ ಮಾಡ್ತಿದ್ದಾರೆ. ಈ ಚಾಳಿಯನ್ನ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದೆ. ರಾಘವೇಂದ್ರ ಅವರೇ ನಿಮ್ಮ ಸರ್ಕಾರ ಇದೆ. ಹೋಗಿ ಮಾತನಾಡಬೇಕು. ಕೇವಲ ದೆಹಲಿಗೆ ಹೋಗಿ ಫೋಟೋ ಹಾಕೋದನ್ನ ಮಾಡಬೇಡಿ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ನಾಗರಾಜ್ ಗೌಡ, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.