Malenadu Mitra
ರಾಜಕೀಯ

ವಿಜಯೇಂದ್ರ ಹೊಗಳಿದರೆ, ಇವರಿಗೇನ್ ಸಂಕಟ ?

ಮಲೆನಾಡು ಮಿರರ್, ಶಿವಮೊಗ್ಗ: ಇತ್ತೀಚೆಗೆ ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಹೊಗಳಿದ್ದಕ್ಕೆ ಸಿಎಂ ತವರು ಜಿಲ್ಲೆಯವರೇ ಆದ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆಗಿದ್ದರು. ಅವರನ್ನು ಮಾಧ್ಯಮಗಳು ಹೊಗಳಿದರೆ ಇವರಿಗೇನು ಸಂಕಟ ಎಂಬ ಗುಸು ಗುಸು ಶಿವಮೊಗ್ಗದ ಬಿಜೆಪಿಯಲ್ಲಿ ಈಗಲೂ ಇದೆ ಕಣ್ರಿ. ಅಂದ ಹಾಗೆ ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷ ಅಲ್ಲ ಎಂದು ಪದೇ ಪದೇ ಹೇಳಲಾಗುತ್ತಿದೆಯಾದರೂ, ಈ ಪಕ್ಷದಲ್ಲಿಯೂ ಕೇಂದ್ರ ಹಾಗೂ ಹಲವು ರಾಜ್ಯಗಳಲ್ಲಿ ಆಯಾ ಕಾಲಘಟ್ಟದಲ್ಲಿ ಪ್ರಮುಖ ನಾಯಕರ ಸುತ್ತನೇ ಗಿರಕಿ ಹೊಡೆದದ್ದು ಗೊತ್ತೇ ಇದೆ. ನಮ್ಮ ರಾಜ್ಯದಲ್ಲಿಯೂ ಕೂಡಾ ನಾಲ್ಕು ದಶಕಗಳ ಕಾಲ ಬುಡಮಟ್ಟದಿಂದ ಪಕ್ಷ ಸಂಘಟನೆ ಮಾಡಿದವರು ಯಡಿಯೂರಪ್ಪ. ಮಾಸ್ ಲೀಡರ್ ಆಗಿರುವ ಅವರ ಪಕ್ಷದ ಮೇಲಿನ ಪ್ರಭಾವಳಿ ಈಗಲೂ ಅಬಾಧಿತವಾಗಿದೆ. ತಂದೆಯ ಸಿಎಂ ಖುರ್ಚಿಯ ಕಾವಲುಗಾರರಂತಿರುವ ಪುತ್ರ ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಹೌದು. ಈಗಿನ ಸರಕಾರ ಅಧಿಕಾರಕ್ಕೆ ಬರಲು ಅವರೂ ಸಾಕಷ್ಟು “ಬೆವರು’ ಹರಿಸಿದ್ದಾರೆ. ಮಾತ್ರವಲ್ಲದೆ ಪಕ್ಷ ಕೊಟ್ಟ ಟಾಸ್ಕ್ ಯಶಸ್ವಿಗೊಳಿಸಲು ಶಿರಾ ಉಪಚುನಾವಣೆಯಲ್ಲಿ ರಾತ್ರಿ-ಹಗಲು ಕೆಲಸ ಮಾಡಿದ್ದಾರೆ. ಅದರ ಪರಿಣಾಮವಾಗಿ ಜೆಡಿಎಸ್ ಭದ್ರ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹಳೇ ವಿಷಯ.
ಬಿಜೆಪಿಯು ಯಾವುದೇ ಚುನಾವಣೆಯನ್ನೂ ಪೂರ್ವ ತಯಾರಿ ಇಲ್ಲದೆ ಎದುರಿಸುವುದಿಲ್ಲ. ಅದೇ ರೀತಿ ಕಾಡುಗೊಲ್ಲ ಪ್ರಾಧಿಕಾರ ರಚನೆ ಘೋಷಣೆ ಮಾಡಿಕೊಂಡೇ ಶಿರಾ ಕಣಕ್ಕಿಳಿದು ಗೆಲುವು ದಾಖಲಿಸಿದೆ. ಈ ರಾಷ್ಟ್ರೀಯ ಪಕ್ಷದಲ್ಲಿ ಚುನಾವಣಾ ಸಮಿತಿ ಲೆಕ್ಕಾಚಾರದಂತೆ ಎಲ್ಲ ನಾಯಕರೂ ಶಿರಾದಲ್ಲಿ ತಮಗೆ ಕೊಟ್ಟ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲ್ಲಲಾಗಿದೆ. ಹೀಗಿರುವಾಗ ಮಾಧ್ಯಮಗಳು ಗೆಲುವಿನ ಎಲ್ಲಾ ಕ್ರೆಡಿಟ್ ಅನ್ನು ವಿಜಯೇಂದ್ರ ಅವರಿಗೆ ಕೊಟ್ಟಿರುವುದು ಹಿರಿಯ ನಾಯಕರಾದ ಈಶ್ವರಪ್ಪರಿಗೆ ಸಹಜವಾಗಿಯೇ ಬೇಸರ ತಂದಿರಬಹುದು ಎಂಬುದು ಬಿಜೆಪಿ ನಿಷ್ಟಾವಂತರ ಆಂಬೋಣ. ಕೆ.ಆರ್.ಪೇಟೆಯಲ್ಲಿ ಸಕ್ಸಸ್ ಆಗಿದ್ದ ವಿಜಯೇಂದ್ರ ಅವರ ತಂತ್ರಗಾರಿಕೆ ಶಿರಾದಲ್ಲಿ ಫಲಕೊಟ್ಟಿದೆ. ಇನ್ನು ಮಸ್ಕಿ ಮತ್ತು ಬಸವಕಲ್ಯಾಣದಲ್ಲೂ ತಂತ್ರಗಾರಿಕೆ ಮುಂದುವರಿಸಲಿದ್ದಾರೆನ್ನಲಾಗಿದೆ ಅಲ್ಲಿನ ಫಲಿತಾಂಶ ಇನ್ಯಾರನ್ನು ಸಂಕಟಕ್ಕೀಡುಮಾಡುತ್ತೊ ಕಾಲವೇ ನಿರ್ಧರಿಸಲಿದೆ ಏನಂತರಿ ?

Ad Widget

Related posts

ಸಾಕು ನಾಯಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ: ಠಾಣೆಗೆ ದೂರು

Malenadu Mirror Desk

ಬಿಜೆಪಿ ಸೇರಿದ ರಾಜು ತಲ್ಲೂರು, ಸೊರಬದಲ್ಲಿ ಕಾಂಗ್ರೆಸ್ ಇಲ್ಲದಂತೆ ಮಾಡ್ತಾರಂತೆ !

Malenadu Mirror Desk

ಬಿಜೆಪಿ ಸಭೆಯಲ್ಲಿ ಮಲೆನಾಡಿನ ಸಮಸ್ಯೆಗಳೂ ಧ್ವನಿಸಲಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.