ಸೊರಬ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ರೈತ ಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ದೇಶವ್ಯಾಪಿ ಬಂದ್‍ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಖಾಸಗಿ ಮತ್ತು ಸರ್ಕಾರಿ ಬಸ್‍ಗಳು ಎಂದಿನಂತೆ ಸಂಚಾರ ಕೈಗೊಂಡವು. ಆಟೋ ರಿಕ್ಷಾಗಳ ಸಂಚಾರವಿದ್ದ ಕಾರಣ ದೂರದ ಊರಿನಿಂದ ಆಗಿಸಿದ ರೋಗಿಗಳು ಮತ್ತು ಪ್ರಯಾಣಿಕರಿಗೆ ಸಮಸ್ಯೆ ಎದುರಾಗಲಿಲ್ಲ. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‍ಗಳಲ್ಲಿ ವಹಿವಾಟು ಎಂದಿನಂತೆ ನಡೆಯಿತು.
ರೈತ ಸಂಘಟನೆಗಳ ಕರೆಗೆ ಬೆಂಬಲ ಸೂಚಿಸಿ ದಿನಸಿ ವ್ಯಾಪಾರಸ್ಥರು, ಜವಳಿ ವರ್ತಕರು ಹಾಗೂ ಹೊಟೇಲ್ ಉದ್ಯಮಿಗಳು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಬಂದ್‍ಗೆ ಬೆಂಬಲ ಸೂಚಿಸಿತು.
ಶ್ರೀ ರಂಗನಾಥ ದೇವಸ್ಥಾನದ ಮುಂಭಾಗ ಜಮಾವಣೆಗೊಂಡ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪಟ್ಟಣ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹಾಲೇಶಪ್ಪ ಗೌಡ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರ ಮರಣ ಶಾಸನ ಬರೆಯಲು ಮುಂದಾಗಿದೆ. ದೆಹಲಿಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ರೈತರ ಹಿತ ಕಾಯುವ ಬದಲು ಕಾಪೆರ್Çೀರೇಟ್ ಸಂಸ್ಥೆಗಳ ಕೈಗೊಂಬೆಯಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವರ್ತಿಸುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ, ಮುಖಂಡ ಕೆ. ಮಂಜುನಾಥ ಹಳೇಸೊರಬ, ಶಿವಣ್ಣ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಗಣಪತಿ, ಎಂ.ಡಿ. ಶೇಖರ್, ಎಪಿಎಂಸಿ ಉಪಾಧ್ಯಕ್ಷ ಜೆ. ಪ್ರಕಾಶ್, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಪ್ಪ ಓಟೂರು, ತಾಲೂಕು ಉಪಾಧ್ಯಕ್ಷ ಶಿವಪೂಜಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ಗುತ್ಯಪ್ಪ, ಲೋಕಪ್ಪ, ದಾನಪ್ಪ, ಗದಿಗೆಪ್ಪ ಗೌಡ, ಅಣ್ಣಾಜಿ ಗೌಡ, ವಿರೂಪಾಕ್ಷಪ್ಪ ಇತರರು ಪಾಲ್ಗೊಂಡಿದ್ದರು.