ಸಾಗರ, ಡಿ.೮: ದೇಶಾದ್ಯಂತ ನಡೆಯುತ್ತಿರುವ ರೈತ ಚಳುವಳಿಯನ್ನು ಬೆಂಬಲಿಸಿ, ಮಲೆನಾಡು ಭಾಗದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಮಲೆನಾಡು ರೈತರ ಹೋರಾಟ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂಸುಧಾರಣೆ ಮತ್ತು ಎಪಿಎಂಸಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಯನ್ನು ರದ್ದುಪಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರದ ಅರಣ್ಯಹಕ್ಕು ಕಾಯ್ದೆ ಜಾರಿಗೊಳಿಸಿ ರೈತರಿಗೆ ಅರಣ್ಯಭೂಮಿ ಹಕ್ಕು ನೀಡಬೇಕು. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಲಾಗಿದೆ.
ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ರಂತೆ ೧೯೭೮ರ ಪೂರ್ವದಲ್ಲಿ ಅರಣ್ಯಭೂಮಿ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡಬೇಕು. ಶರಾವತಿ ಮುಳುಗಡೆ ಸಂತ್ರಸ್ತ ರಿಗೆ ನ್ಯಾಯ ದೊರಕಿಸಿ ಕೊಡಲು ಮದನ್ ಗೋಪಾಲ್ ಕೈಗೊಂಡ ತೀರ್ಮಾನದಂತೆ ಎಲ್ಲ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು. ಎಂಪಿಎಂ ಕಾರ್ಖಾನೆ ಮುಚ್ಚಿರುವುದರಿಂದ ೩೫ಸಾವಿರ ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಭೂರಹಿತರು,
ಸಣ್ಣ ಹಿಡುವಳಿದಾರರಿಗೆ ಮಂಜೂರು
ಮಾಡ ಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕೇಂದ್ರ ಸರ್ಕಾರ ಕಳೆದ ಆರೂ ವರ್ಷಗಳ ಹಿಂದೆ ಅಡಿಕೆ ಹಾನಿಕಾರಕ, ಕ್ಯಾನ್ಸರ್ ರೋಗ ತರುವ ವಸ್ತು ಎಂಬ ಖೋಟಾ ವರದಿಯನ್ನು ರದ್ದುಪಡಿಸಿ ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿರುವ ಪ್ರಕರಣವನ್ನು ಪರಿಸಮಾಪ್ತಿ ಗೊಳಿಸಲು ವಸ್ತುನಿಷ್ಟ ನ್ಯಾಯವಾದ ಅಡಿಕೆ ಸಂಶೋಧನಾ ವರದಿಯನ್ನು ಮಂಡಿಸ ಬೇಕು. ಕರೂರು ಭಾರಂಗಿ ಹೋಬಳಿ ಯನ್ನು ಅವೈಜ್ಞಾನಿಕವಾಗಿ ಕಾನೂನು ಬಾಹಿರವಾಗಿ ಶರಾವತಿ ಅಭಯಾರಣ್ಯ ಎಂದು ಘೋಷಿಸಿರುವುದನ್ನು ರದ್ದುಪಡಿಸ ಬೇಕು. ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ಜೊತೆಗೆ ಗೋರಕ್ ಸಿಂಗ್ ವರದಿಯನ್ನು ಜಾರಿಗೊಳಿಸಬೇಕು. ರೈತರ ಇದುವರೆಗಿನ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಸೊಪ್ಪಿನಬೆಟ್ಟ, ಕಾನು, ಪರಿಭಾವಿತ ಅರಣ್ಯ ಎಂದು ರಾಜ್ಯ ಸರ್ಕಾರ ಘೋಷಿಸಿದ್ದನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ತೀ.ನ. ಶ್ರೀನಿವಾಸ್, ಮಲಿ ಕಾರ್ಜುನ ಹಕ್ರೆ, ಜಿ.ಪುಟ್ಟಪ್ಪ, ಕೆ.ಎನ್. ವೆಂಕಟಗಿರಿ, ಶಿವಾನಂದ ಕುಗ್ವೆ, ಸೈಯದ್ ಜಾಕೀರ್, ಎಲ್.ವಿ.ಸುಭಾಷ್, ಎನ್. ಲಲಿತಮ್ಮ, ಕನ್ನಪ್ಪ ಬೆಳಲಮಕ್ಕಿ, ಎಲ್.ಟಿ. ತಿಮ್ಮಪ್ಪ ಹೆಗಡೆ, ರವಿ ಜಂಬಗಾರು, ಅಮೃತ್ ರಾಸ್, ಮಹಾಬಲೇಶ್ವರ ಶೇಟ್, ಮಂಜು ನಾಥ ಬಳಸಗೋಡು, ಮಹ್ಮದ್ ಖಾಸಿಂ, ಪರಮೇಶ್ವರ ದೂಗೂರು, ಎನ್.ಡಿ. ವಸಂತಕುಮಾರ್ ಇನ್ನಿತರರು ಹಾಜರಿದ್ದರು.