Malenadu Mitra
ಸಾಹಿತ್ಯ

ಡಿಜಿಟಲ್ ಸಾಕ್ಷರಲೋಕದ ಅಪಾಯಕಾರಿ ಪ್ರವೃತ್ತಿಗಳು

“ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ…
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ”
ಈ ಕವಿಸಾಲುಗಳು ಆಗೀಗ ಮತ್ತೆ ಮತ್ತೆ ಕೆಣಕುತ್ತವೆ.
ಈಗಂತೂ ಅಂತರ್ಜಾಲಗಳು ಇಡೀ ಜಗತ್ತನ್ನೇ ಹತ್ತಿರ ಆಗಿಸಿವೆ. ಕೂತಲ್ಲಿಯೇ ಇಡೀ ಜಗತ್ತನ್ನು ಸಂಪರ್ಕಿಸಿ ಮೌನ ಮುರಿದು ಸ್ಪಂದಿಸಲೂ, ಜಗಳವಾಡಲೂ ಸಹ ಸಮಾನ ಅವಕಾಶಗಳಿವೆ. ಆದರೂ ಹತ್ತಿರವಿದ್ದರೂ , ಬೆರಳ ತುದಿಯಲ್ಲಿ ಸಂಪರ್ಕವಿದ್ದರೂ ಹತ್ತಿರದ ಗೆಳೆಯರು ದೂರ ಆಗುವ, ದೂರ ಇದ್ದವರು ಹತ್ತಿರ ಆಗುವ ವೈರುಧ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಹ ಸಮಾಜದ ಕೇರಿಕೇರಿಗಳಲ್ಲಿ ಇದ್ದಷ್ಟೇ ವ್ಯಾಪಕವಾಗಿದೆ. ವೃತ್ತಿ ಅಸೂಯೆ , ಬ್ರಮೆ, ಪರಸ್ಪರ ಕಾಲೆಳೆಯುವಿಕೆ, ಅವಸರದ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣಗಳು ದ್ವಾರಬಾಗಿಲಾಗಿವೆ.

ಆದರೆ ಒಮ್ಮೆ ಯೋಚಿಸಿ…..

ದನಿ ಇಲ್ಲದವರಿಗೆ ದನಿಯಾಗಲು ,ಜೀವಪರತೆ, ಮಾನವೀಯತೆಯ ಬೀಜ ಬಿತ್ತಲು , ರಾಜಕೀಯ ಸಾಕ್ಷರತೆ ಹೆಚ್ಚಿಸಲು,ಸರ್ಕಾರದ ಬೊಕ್ಕಸವನ್ನು ಹಾಗೂ ಎಲ್ಲ ಯೋಜನೆಗಳನ್ನು ಪಾರದರ್ಶಕವಾಗಿ ಜನರ ಮುಂದಿಡಲು, ಗುಣಾತ್ಮಕ ರಚನಾತ್ಮಕ ಪ್ರಜಾಪ್ರಭುತ್ವ ರೂಪಿಸಲು, ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿ ವೈಚಾರಿಕತೆ ಮೂಡಿಸಲು, ಜನರ ಜಾಗೃತಿ ಹೆಚ್ಚಿಸಲು , ಜಾತಿಯ ವಿಷ ಬೀಜವನ್ನು ಕಿತ್ತುಹಾಕಲು ಇಲ್ಲಿ ಹೆಚ್ಚು ಶ್ರಮವಿಲ್ಲದೆ, ಖರ್ಚುವೆಚ್ಚಗಳು ಇಲ್ಲದೆ ಸಾಕಷ್ಟು ಅವಕಾಶಗಳಿವೆ.

ಆದರೆ ಆಗುತ್ತಿರುವುದೇನು….?
ಇತಿಹಾಸ ತಿರುಚಿ ಪ್ರಚೋದಿಸುವ, ನಾಯಕರಿಗೆ ಪ್ರತಿ ನಾಯಕರನ್ನು ಸೃಷ್ಟಿಸುವ, ಸಿದ್ಧಾಂತಕ್ಕೆ ಪ್ರತಿ ಸಿದ್ಧಾಂತವನ್ನು ಸೃಷ್ಟಿಸುವ, ಅನ್ಯರು , ಅನನ್ಯರ ನಡುವೆ ಒಡೆದುಹಾಕುವ ಪ್ರವೃತ್ತಿಗೆ ಡಿಜಿಟಲ್ ಸಾಮಾಜಿಕ ಜಾಲತಾಣಗಳು ವ್ಯವಸ್ಥಿತವಾಗಿ ಕಾರ್ಪೊರೇಟ್ ವಲಯವನ್ನು ನಾಚಿಸುವಂತೆ , ಪೇಯ್ಡ್ ಟೆಕ್ಕಿಗಳ ಶ್ರಮ ಬಳಸಿಕೊಂಡು ಬಹುಬೇಗ ವ್ಯಾಪಕಗೊಳಿಸಲಾಗುತ್ತಿದೆ.
ಸುಳ್ಳು, ಭ್ರಮೆ ಹುಟ್ಟಿಸುವ , ಸುಳ್ಳನ್ನೇ ಸತ್ಯ ಎಂದು ನಂಬಿಕೆ ಬಿತ್ತುವ ಮಾಹಿತಿ ಕಸ ಕಕ್ಕುವುದಕ್ಕೆ ಜಾಲತಾಣಗಳು ಬಳಕೆಯಾಗುತ್ತಿವೆ.
ಜಾತಿ ಮತ ಧರ್ಮ ಆಧಾರಿತ ಜಾಲತಾಣಗಳ ಗುಂಪುಗಳು.. ಮೂಢತೆಯನ್ನು ಬಿತ್ತಿ ಅಸಹಾಯಕ ಜನರ ಸಮಸ್ಯೆಗಳನ್ನು ಬಗೆಹರಿಸುವ ಭ್ರಮೆ ಹುಟ್ಟಿಸುವ ಭಕ್ತಿ ಉದ್ಯಮಿಗಳ ಪೇಜ್ ಗಳು ,ಜ್ಯೋತಿಷ್ಯ ಉದ್ಯಮಿಗಳ ಪೇಜ್ ಗಳು, ಬಾಯಿತುಂಬಾ ಬದನೆ ಶಾಸ್ತ್ರ ಉಲಿಯುವ ಪೇಜ್ ಗಳು, ಕಾಲೆಳೆಯುವ ಟ್ರೋಲ್ ಪೇಜ್ ಗಳು, ಆನ್ ಲೈನ್ ಡೇಟಿಂಗ್ ಆಪ್ ಗಳು ಡಿಜಿಟಲ್ ಸಾಕ್ಷರರನ್ನು ಕೃತಕ ಗೀಳಿನಲ್ಲಿ ಹಿಡಿದಿಟ್ಟು ಅಪಾಯಕಾರಿ ಬೆಳವಣಿಗೆಯತ್ತ ಯುವ ಸಮೂಹವನ್ನು ಆಪೋಷನಕ್ಕೆ ತೆಗೆದುಕೊಳ್ಳುತ್ತಿವೆ. ಅಂದು ಸಾಕ್ಷರರಿಲ್ಲದ ನಮ್ಮ ದೇಶದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದಂತೆ ಇಂದಿನ ಸಾಕ್ಷರ ರಾಕ್ಷಸರ ಪ್ರವೃತ್ತಿಯ ಡಿಜಿಟಲ್ ಜಾಲತಾಣಗಳ ದುರ್ಬಳಕೆಯನ್ನು ತಿದ್ದಲು ಡಿಜಿಟಲ್ ಜಾಲತಾಣ ಸುಧಾರಣಾ ಚಳುವಳಿಯೇ ರೂಪುಗೊಳ್ಳಬೇಕಿದೆ.

ಜಾಲತಾಣಗಳಲ್ಲೂ ವ್ಯಾಪಕಗೊಳ್ಳುತ್ತಿರುವ ಸಾಮಾಜಿಕ ವ್ಯಸನಗಳ ಕುರಿತು ಅರಿವು ಮೂಡಿಸಿ ಯುವಸಮಾಜದ ತಿಳಿವು ಹೆಚ್ಚಿಸಬೇಕಾಗಿದೆ. ಮಾನವ ಪ್ರವೃತ್ತಿಗಳ ಮೇಲೆ ನಿಗಾ ವಹಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳು ಸಮಾಜದ ಧನಾತ್ಮಕ ಬದಲಾವಣೆಗೆ ಪೂರಕವಾಗಿ ಬಳಕೆಯಾಗುವಂತೆ ಕಾನೂನಿನ ವ್ಯಾಪ್ತಿಯಲ್ಲಿ ಸೂಕ್ತ ಪರಿಹಾರ ಕ್ರಮ ಕಂಡುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಶಿಕ್ಷಿತರ ಸಂಖ್ಯೆ ಅಧಿಕವಾಗಿರುವ ಇಂದಿನ ಶತಮಾನಗಳಲ್ಲಿ ಸಾಮಾಜಿಕ ಸಂವಹನ ಸೇತುವೆಯಾಗಬೇಕಾಗಿದ್ದ ಜಾಲತಾಣಗಳು ಸಮಾಜದ ದುಷ್ಪರಿಣಾಮಕ್ಕೆ ಕಾರಣವಾಗುವ ಬಹುಹಂತದ ಅಪಾಯಗಳಿವೆ. ಡಿಜಿಟಲ್ ಸಾಕ್ಷರ ಲೋಕದ ಅಪಾಯಕಾರಿ ಪ್ರವೃತ್ತಿಗಳು ಮಾಹಿತಿಕ್ರಾಂತಿಯ ಈ ಕಾಲಘಟ್ಟದಲ್ಲಿ ಹಲವು ಆಯಾಮಗಳಲ್ಲಿ ಮನುಕುಲವನ್ನು ನಾಶದಂಚಿಗೆ ತಳ್ಳುವ ಅಪಾಯಗಳಿವೆ.

ರವಿರಾಜ್ ಸಾಗರ್.ಮಂಡಗಳಲೆ.

Ad Widget

Related posts

ತಕ್ಕಡಿ ನ್ಯಾಯ ಮತ್ತು ಇತರ ಪುಟ್ಕಥೆಗಳು

Malenadu Mirror Desk

ಬೆವರಿನ ಶ್ರಮಕ್ಕೆ ಬೆಲೆ ಕೊಡದ ಸಂಪತ್ತು ಶೂನ್ಯಕ್ಕೆ ಸಮಾನ

Malenadu Mirror Desk

ಸಾಹಿತ್ಯ ಸೌಹಾರ್ದ ಸಮಾಜ ಕಟ್ಟಬೇಕು: ಪ್ರೊ.ಎಸ್.ಜಿ.ಸಿದ್ದರಾಮಯ್ಯ
೧೭ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ, ಗೋಷ್ಠಿಗಳನ್ನು ಮೌಲಿಕ ವಿಷಯಗಳ ಚರ್ಚೆ

Malenadu Mirror Desk

2 comments

Ravichandra December 11, 2020 at 3:12 pm

Tq..

Reply
Malenadu Mirror Desk January 2, 2021 at 3:44 am

your welcome

Reply

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.