Malenadu Mitra
ಜನ ಸಂಸ್ಕೃತಿ ಮಲೆನಾಡು ಸ್ಪೆಷಲ್

ಸಸ್ಯ ಕಸಿಯ ಕಾಯಕಯೋಗಿ

ಓದಿದ್ದು ದ್ವಿತೀಯ ಪಿಯುಸಿ. ಆದರೆ 2 ಸಾವಿರಕ್ಕೂ ಹೆಚ್ಚು ಗಿಡ,ಮರ, ಬಳ್ಳಿಗಳನ್ನು ವೈಜ್ಞಾನಿಕ ಹೆಸರಿನಿಂದ ಗುರುತಿಸ ಬಲ್ಲರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಬೇಕಾದ ಪೂರಕ ವಿಷಯವನ್ನು ಇವರು ನೀಡಿದ್ದಾರೆ. ಇಳಿ ವಯಸ್ಸಿನಲ್ಲೂ ಕತ್ತಲೆ ಕಾಡನ್ನು ರಕ್ಷಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಅಪರೂಪದ ವ್ಯಕ್ತಿ ಪರಿಸರ ತಜ್ಞ ಎಂ.ಬಿ (ಮಂಜುನಾಥ ಬಂಗಾರ್ಯ )ನಾಯ್ಕ್. ಇವರ ಪರಿಸರ ಪ್ರೇಮ ಇಂದಿನ ಎಲ್ಲರಿಗೂ ಮಾದರಿ.

ಸಿದ್ದಾಪುರ ತಾಲೂಕಿನ (ಉತ್ತರ ಕನ್ನಡ ಜಿಲ್ಲೆ) ಕಡಕೇರಿಯ ಎಂ.ಬಿ.ನಾಯ್ಕ್. 1983ರಲ್ಲಿ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನ ಕೇಂದ್ರದಲ್ಲಿ ಬಯೋಡೈವರ್ಸಿಟಿ ಪ್ರಾಜೆಕ್ಟ್‍ನಲ್ಲಿ 24 ವರ್ಷ ಸಸ್ಯ ಗುರುತಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ದೇಶದ ಪ್ರತಿಷ್ಠಿತ ಸಸ್ಯ ವರ್ಗೀಕರಣ ಪಿತಾಮಹಾರಾದ ಫಾದರ್ ಸಾಲ್ಡಾನಾ ಹಾಗೂ ಪರಿಸರ ತಜ್ಞ ಪೆÇ್ರೀ. ಮಾಧವ ಗಾಡ್ಗೀಳರ ಬಳಿ ಕೆಲಸ ಮಾಡಿ ತಮ್ಮ ಪರಿಸರ ಜ್ಞಾನ ಹೆಚ್ಚಿಸಿಕೊಂಡರು. ಎಂ.ಬಿ ನಾಯ್ಕ್ ಸಾಗರ ತಾಲೂಕಿನ ಸಮುದಾಯ ಅರಣ್ಯಗಳ ಬಗ್ಗೆ ನಡೆಸಿದ ಅಧ್ಯಯನದ ಫಲವಾಗಿ 1993ರಲ್ಲಿ ಆಲಳ್ಳಿ ಮತ್ತು ಹುಣಸೂರು ಗ್ರಾಮದ ಸಮುದಾಯ ಅರಣ್ಯಕ್ಕೆ ಕರ್ನಾಟಕ ಸರಕಾರದ ಪರಿಸರ ಪ್ರಶಸ್ತಿ ಸಂದಿದೆ. ನಾಯ್ಕ ಅವರ ಸೇವೆ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಹೊರ ರಾಜ್ಯ, ದೇಶಗಳಿಗೂ ಹಬ್ಬಿದೆ. ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ಸಸ್ಯ ಅಧ್ಯಯನಕ್ಕೆ ಸಹಕಾರ ನೀಡಿದ್ದಾರೆ. 2017ರಲ್ಲಿ ತಾಳೆ ಕೃಷಿಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಗುಜರಾತ್ ರಾಜ್ಯಕ್ಕೂ ಭೇಟಿ ನೀಡಿದ್ದರು. ವಿದೇಶಿ ವಿಜ್ಞಾನಿಗಳಾದ ಡಾ. ಪ್ಲಂಬರ್ಗ್ (ಜರ್ಮನಿ) ಹಾಗೂ ಡಾ. ಡೋನಾಲ್ಡ್ ಹ್ಯೂಜಸ್ (ಅಮೆರಿಕ) ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅಧ್ಯಾಯನಕ್ಕೂ ಸಹಕಾರ ನೀಡಿದ್ದಾರೆ. 1991-92ರಲ್ಲಿ ಇವರು ದೇವರ ಬನಗಳ ಅಧ್ಯಯನ ನಡೆಸಿದರು. ಈ ಸಂದರ್ಭದಲ್ಲಿ ಕತ್ತಲೆಕಾನು ಗೇರು ಎನ್ನುವ ಹೊಸ ಪ್ರಭೇದ ಗುರುತಿಸಿದರು. ಇದಕ್ಕೆ ಎಂಪ್ರಿ ವಿಜ್ಞಾನಿಗಳು ಸೆಮಿಕಾರ್ಪಸ್ ಕತ್ತಲೆಕಾನಸಿಸ್ ಎಂದು ನಾಮಕರಣ ಮಾಡಿದರು. 2005ರಿಂದ 2010ರ ತನಕ ಇಕೋವಾಚ್ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದವರು ಜಂಟಿಯಾಗಿ ನಿರ್ಮಿಸಿರುವ ಜೈವಿಕ ವೈವಿಧ್ಯ ಸಸ್ಯ ಉದ್ಯಾನದಲ್ಲಿ 350ಕ್ಕೂ ಹೆಚ್ಚು ಪ್ರಭೇದಗಳನ್ನು ತಂದು ಬೆಳಸುವ ಜವಾಬ್ದಾರಿಯನ್ನು ನಿರ್ವಹಿಸಿದರು. 2012ರಲ್ಲಿ ಥಾಯ್ಲೆಂಡ್‍ನಲ್ಲಿ ನಡೆದ ಉಷ್ಣವಲಯದ ಕಾಡು ಹಣ್ಣುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತ ಜಾಗತಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅನೇಕ ಕಾಡು ಜಾತಿಯ ಹಣ್ಣುಗಳ ಸಸ್ಯಗಳನ್ನು ಊರ ಸಸ್ಯಗಳೊಂದಿಗೆ ಕಸಿ ಮಾಡಿ ಯಶಸ್ವಿಯಾಗಿದ್ದಾರೆ. 2014ರಿಂದ ಆಯ್ದ ಔಷಧಿ ಪ್ರಬೇಧಗಳ ಸುಸ್ಥಿರ ಸಂಗ್ರಹಣೆ, ನರ್ಸರಿ ಮತ್ತು ಸಸ್ಯ ಸಂತಾನಾಭಿವೃದ್ಧಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪಶ್ಚಿಮಘಟದ ತೀರಾ ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಅನೇಕ ಸಸ್ಯ ಸಂಕುಲವನ್ನು ತಮ್ಮದೇ ಆದರ ನರ್ಸರಿಯಲ್ಲಿ ಬೆಳಸಿ ಸಂರಕ್ಷಿಸುತ್ತಿದ್ದಾರೆ. ಇವರ ಸಾಧನೆಗೆ 2016-17ನೇ ಸಾಲಿನಲ್ಲಿ ಕರ್ನಾಟಕ ಸರಕಾರ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ. ಕೃಷಿ ವಿಶ್ವವಿದ್ಯಾಲಯ ಧಾರವಾಡ ಹಾಗೂ ಅರಣ್ಯ ಮಹಾವಿದ್ಯಾಲಯ ಶಿರಸಿಯಿಂದ ಕಸಿ ತಜ್ಞ ಹಾಗೂ ಪ್ರಗತಿಪರ ರೈತ ಪ್ರಶಸ್ತಿ ನೀಡಿದ್ದಾರೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಸಂಘಸಂಸ್ಥೆಗಳು ಎಂಬಿ ನಾಯ್ಕ್ ಅವರನ್ನು ಗುರುತಿಸಿ ಸನ್ಮಾನಿಸಿವೆ.

Ad Widget

Related posts

ಮಲೆನಾಡಿಗೂ ಕಾಡಲಿದೆಯೇ ಬ್ರಿಟನ್ ಗುಮ್ಮ ?

Malenadu Mirror Desk

ವರ್ಷದ ಒಳಗಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾರಂಭ: ಮುಖ್ಯಮಂತ್ರಿ

Malenadu Mirror Desk

ಚಿತ್ತಾರ ಕಲೆಗೆ ಸರಕಾರದಿಂದ ನೆರವು:ಭರವಸೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.