ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳು ನೇಮಿಸಿರುವ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿಗೆ ಸಂಬಂಧಪಟ್ಟಂತೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ದೇವಸ್ಥಾನಕ್ಕೆ ಜಿಲ್ಲಾಧಿಕಾರಿ ರಚಿಸಿರುವ ಸಲಹಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರದ್ದುಗೊಳಿಸುವಂತೆ ಕೋರಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ದಿನೇಶ್‍ಕುಮಾರ್ ಅವರಿದ್ದ ಏಕಸದಸ್ಯ ಪೀಠ ಸರಕಾರಕ್ಕೆ ಮೇಲಿನ ಸೂಚನೆ ನೀಡಿದೆ.
ದೇವಸ್ಥಾನ ಖಾಸಗಿ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಸರಕಾರದ ಪಾತ್ರ ಯಾಕೆ ಎಂದು ಪ್ರಶ್ನಿಸಿರುವ ನ್ಯಾಯಪೀಠ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿದೆ. ಪ್ರಕರಣದಲ್ಲಿ ಆಡಳಿತ ಮಂಡಳಿಯ ಮನವಿ ಪರಿಗಣಿಸಿದ ನ್ಯಾಯಾಲಯ, ಧರ್ಮದರ್ಶಿ ರಾಮಪ್ಪ ಅವರ ನೇತೃತ್ವದ ಆಡಳಿತ ಮಂಡಳಿ ದೇವಸ್ಥಾನದ ಆಡಳಿತವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಮೌಕಿಕ ಆದೇಶ ನೀಡಿದೆ. ಈ ಅವಧಿಯಲ್ಲಿ ಸರಕಾರ ದೇವಸ್ಥಾನದ ನಿತ್ಯದ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದೆಂದು ತಿಳಿಸಿದೆ.
ಹೈಕೋರ್ಟ್ ಆದೇಶದಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಗೆ ಕೊಂಚ ನಿರಾಳ ಸಿಕ್ಕಂತಾಗಿದೆ. ನ್ಯಾಯಾಲಯದ ಆದೇಶದಂತೆ ಸರಕಾರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವಿದ್ದು, ಸರಕಾರದ ನಡೆಯ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧಾರವಾಗಲಿವೆ.
ಅರ್ಚಕರು ಮತ್ತು ಆಡಳಿತ ಮಂಡಳಿ ನಡುವೆ ನಡೆದ ಭಿನ್ನಮತವನ್ನೇ ಮುಂದಿಟ್ಟುಕೊಂಡಿದ್ದ ರಾಜ್ಯ ಸರಕಾರ ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿತ್ತು. ಜಿಲ್ಲಾಧಿಕಾರಿ ಮೂಲಕ ಸಲಹಾ ಸಮಿತಿ ರಚನೆ ಮಾಡಿದ್ದು. ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಲಹಾ ಸಮಿತಿ ಸಭೆಯನ್ನೂ ನಡೆಸಲಾಗಿತ್ತು. ಸಮಿತಿಯ ಎರಡನೇ ಸಭೆ ನಡೆಯುವ ಮುನ್ನ ಪ್ರಕರಣ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದಿದೆ. ಈ ನಡುವೆ ಗ್ರಾಮಪಂಚಾಯಿತಿ ಚುನಾವಣೆಯೂ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆಯ ಕಾರಣಕ್ಕೆ ಎರಡನೇ ಸಭೆ ನಡೆದಿಲ್ಲ ಎನ್ನಲಾಗಿದೆ.
ಯಥಾಸ್ಥಿತಿ ಮುಂದುವರಿಕೆ
ಸೋಮವಾರ ಹೈಕೋರ್ಟ್ ನೀಡಿದ ಆದೇಶದಿಂದ ಸಾಗರ ಉಪವಿಭಾಗಾಧಿಕಾರಿ ಮೂಲಕ ಅಧಿಕಾರ ಚಲಾವಣೆ ಮಾಡುತ್ತಿದ್ದ ಜಿಲ್ಲಾಧಿಕಾರಿಗಳ ಕ್ರಮಕ್ಕೆ ತಡೆಯಾದಂತಾಗಿದೆ. ಸರಕಾರ ಸಲಹಾ ಸಮಿತಿ ರಚನೆ ಮಾಡಿದಾಗಿನಿಂದ ದೇವಸ್ಥಾನದಲ್ಲಿ ಪೊಲೀಸ್ ಪಹರೆ ಹೆಚ್ಚುಮಾಡಿದ್ದು, ಕೊರೊನ ಕಾರಣದಿಂದ ಸ್ಥಗಿತವಾಗಿದ್ದ ದೇವಳದ ಪೂಜಾ ವಿಧವಿಧಾನಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿರಲಿಲ್ಲ.
ಸಾರ್ವಜನಿಕರ ವಿರೋಧ
ಸರಕಾರ ಹಿಂದುಳಿದ ವರ್ಗದ ಆಡಳಿತ ಮಂಡಳಿಯಿರುವ ದೇವಸ್ಥಾನದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಸಾರ್ವಜನಿಕರು ಹಾಗೂ ಭಕ್ತವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸರಕಾರದ ಕ್ರಮ ಖಂಡಿಸಿ ಮಂಗಳೂರು, ಶಿವಮೊಗ್ಗ, ಉಡುಪಿ ಹಾಗೂ ಕಾರವಾರ ಸೇರಿದಂತೆ ಹಲವು ಕಡೆ ಪ್ರತಿಭಟನೆಗಳೂ ನಡೆದಿದ್ದವು. ಶಿವಮೊಗ್ಗದಲ್ಲಿ ಸರ್ವಜಾತಿ ಹಾಗೂ ಸರ್ವಪಕ್ಷಗಳ ಮುಖಂಡರ ನೇತೃತ್ವದಲ್ಲಿ ಸಿಗಂದೂರು ಉಳಿಸಿ ಹೋರಾಟ ಸಮಿತಿಯೂ ಅಸ್ತಿತ್ವಕ್ಕೆ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು. ಸರಕಾರದ ಹಸ್ತಕ್ಷೇಪದಿಂದ ಭಕ್ತರ ಶ್ರದ್ಧಾಕೇಂದ್ರದಲ್ಲಿ ಇದ್ದ ಅಡೆತಡೆಗಳಿಗೆ ನ್ಯಾಯಾಲಯದ ಆದೇಶದಿಂದ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಂತಾಗಿದೆ.
previous post
next post
2 comments
Heartiest best wishes to Malnad mirror news portal
Thank you