ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಸಧ್ಯದ ಮೋಸ್ಟ್ ಅಗ್ರೆಸ್ಸಿವ್ ರಾಜಕಾರಣಿ. ಆ ಕಾರಣದಿಂದಲೇ ಅವರೀಗ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯೂ ಆಗಿದ್ದಾರೆ. ಅವರು ಯಾವ್ಯಾವ ಸಂದರ್ಭದಲ್ಲಿ ತೋಳು ಮಡಿದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಿಪ್ಪ ನಮ್ಮ ರೇಣುಕಾಚಾರ್ಯ ಅವರಿಗೆ ಯಕಶ್ಚಿತ್ ಒಂದು ಮುಸಿಯಾ (ಮಲೆನಾಡದಲ್ಲಿ ಅದಕ್ಕೆ ಬುಕ್ಕ ಅಂತಾರೆ) ಗಂಟೆಗಟ್ಟಲೆ ರೂಮಲ್ಲಿ ಕೂಡಿ ಹಾಕುವಂತೆ ಮಾಡಿತ್ತು ಅಂದ್ರೆ ನೀವು ನಂಬಲೇ ಬೇಕು. ಹೊನ್ನಾಳಿಯಲ್ಲಿ ಇತ್ತೀಚೆಗೆ ಒಂದು ಮುಸಿಯಾ ಕಾಟ ಅತಿಯಾಗಿದೆ. ಹಾಗೆ ನೋಡಿದರೆ ಈ ಮುಸಿಯಾ ಅತ್ಯಂತ ಪಾಪದ ಪ್ರಾಣಿ, ಇದು ಮಂಗನ ತರಾ ಗುರಾಯ್ಸಲ್ಲ ಮತ್ತು ಯಾರಿಗೂ ತೊಂದ್ರೆನೂ ಕೊಡಲ್ಲ. ಆದರೆ ಹೊನ್ನಾಳಿ ಪಟ್ಟಣದಲ್ಲಿರುವ ಈ ಮುಸಿಯಾ ಈವರೆಗೆ ಸುಮಾರು ೩೦ ಜನರಿಗೆ ಕಚ್ಚಿದೆಯಂತೆ.
ಅದರಲ್ಲೂ ನಾಲ್ಕು ಮಂದಿ ಪೌರಕಾರ್ಮಿಕರನ್ನು ಕಂಡೊಡನೆ ಬೆನ್ನಟ್ಟುವ ಇದು ಅವರೊಂದಿಗೆ ಒಂದು ರೀತಿಯ ಶತ್ರುತ್ವ ಕಾಯ್ದುಕೊಂಡಿದೆ. ಜನರಿಗೆ ತೊಂದರೆ ಕೊಡುವ ಅದನ್ನು ಬಡಿಗೆ ಹಿಡಿದು ಬೆರಸಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಅದೇನೆ ಇರಲಿ ಮುಖ್ಯಮಂತ್ರಿಗಳ ನೀಲಿಕಣ್ಣಿನ ಹುಡುಗ ನಮ್ಮ ರೇಣುಕಾಚಾರ್ಯರಿಗೆ ಈ ಮಂಗ ಅಲಿಯಾಸ್ ಮುಸಿಯಾ ಯಾಖೆ ಅಟಕಾಯಿಸಿಕೊಂಡಿತು ಅಂತೀರಾ ಮುಂದೆ ಓದಿ…
ಮಂಗಳವಾರ ಹೊನ್ನಾಳಿಯ ಸರಕಾರಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯ ಆಯೋಜಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರ ಆಹ್ವಾನದ ಮೇರೆಗೆ ರೇಣುಕಾಚಾರ್ಯ ಅವರೂ ಬಂದಿದ್ದರು. ಅಲ್ಲಿ ಪೌರ ಕಾರ್ಮಿಕರೂ ಇದ್ದರು. ಯಾವ ಮಾಯದಲ್ಲಿ ಸುದ್ದಿ ತಿಳಿಯಿತೊ ಗೊತ್ತಿಲ್ಲ. ಮುಸಿಯಾ ಆಕ್ರಮಣಕ್ಕೆ ಮುಂದಾಯಿತು. ಕೂಡಲೇ ಶಾಸಕರು ಮತ್ತವರ ತಂಡ ಓಡಿಹೋಗಿ ಆಸ್ಪತ್ರೆಯ ರೂಮೊಂದರಲ್ಲಿ ಬಚ್ಚಿಟ್ಟುಕೊಂಡು ಚಿಲಕ ಹಾಕಿಕೊಂಡಿತು. ಇಷ್ಟಕ್ಕೇ ಮಣಿಯದ ಮುಸಿಯಾ ಒಂದು ಗಂಟೆಗೂ ಹೆಚ್ಚುಕಾಲ ಆಸ್ಪತ್ರೆಯ ಬಳಿಯೇ ಕಾದಿತ್ತು ಕೊನೆಗೆ ಅಧಿಕಾರಿಗಳು ಹಂದಿ ಹಿಡಿಯುವವರನ್ನು ಕರೆಸಿ ಬಲೆ ಬೀಸಿದರು. ಅಪಾಯ ಅರಿತ ಮುಸಿಯಾ ಹಲ್ಲಿನಿಂದ ಬಲೆ ಕತ್ತರಿಸಿಕೊಂಡು ಪೇರಿ ಕಿತ್ತಿತು. ಕೊನೆಗೆ ಕೋಣೆಯಿಂದ ಹೊರಬಂದ ಶಾಸಕ ರೇಣುಕಾಚಾರ್ಯ ಅವರು, ಮುಸಿಯಾ ನನ್ನು ಹಿಡಿದು ಕಾಡಿಗೆ ಬಿಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ತಮ್ಮ ದಾರಿ ಹಿಡಿದರು. ಒಂದೂವರೆ ತಿಂಗಳಿAದ ಹೊನ್ನಾಳಿ ಪಟ್ಟಣಕ್ಕಿರುವ ಮುಸಿಯಾ ಕಂಟಕಕ್ಕೆ ಮುಕ್ತಿ ಸಿಗುವುದೇ ಕಾದು ನೋಡಬೇಕಿದೆ.
previous post
next post