ಇತ್ತೀಚಿನ ದಿನಗಳಲ್ಲಿ ಚುನಾವಣೆ ಎಂದರೇ ಕಿರಿಕ್ ಎಂಬಂತಾಗಿಬಿಟ್ಟಿದೆ ಮಾರ್ರೆ… ನಮ್ಮ ಬುದ್ದಿವಂತರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಚುನಾವಣೆ ದ್ವೇಷಕ್ಕಾಗಿ ಅಡಕೆ ಗಿಡ ನಾಶಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ನಡೆದ ಹಕೀಕತ್ ಎಂಥ ಗೊತ್ತಾ, ಆರಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸು ಎಂಬ ಗ್ರಾಮದಿಂದ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಪ್ರೀತಾ ರಂಜನ್ ಎಂಬುವವರು ಮಹಿಳಾ ಮೀಸಲು ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದಾರೆ. ಆದರೆ ಇವರನ್ನು ಕಣದಿಂದ ಹಿಂದೆ ಸರಿಸಲು ಶಾಸಕ ಆರಗ ಜ್ಞಾನೇಂದ್ರ, ತಾಲೂಕು ಪಂಚಾಯಿತಿ ಸದಸ್ಯ ಚಂದುವಳ್ಳಿ ಸೋಮಶೇಖರ್ ಮತ್ತು ಕುಕ್ಕೆ ಪ್ರಶಾಂತ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೆ ಆ ಹೆಣ್ಣು ಮಗಳು ಬಗ್ಗಲಿಲ್ಲ. ಕೊನೆಗೆ ಅರಣ್ಯ ಇಲಾಖೆ ಗಾರ್ಡ್ ಒಬ್ಬರು, ಹೇಳಿ ಕೇಳಿ ಬಗರ್ ಹುಕುಂ ಭೂಮಿ ನಿಮ್ದು ಇವೆಲ್ಲ ನಿಮುಗೆ ಬೇಕಾ ?.. ಸುಮ್ಮನೆ ಕಣದಿಂದ ಹಿಂದೆ ಸರಿರಿ ಎಂದು ಡೋಸ್ ಕೊಟ್ಟಿದ್ದಾರೆ. ಆದರೆ ಸುಪ್ರೀತಾ ಅದಕ್ಕೂ ಬಗ್ಗದೆ ಕಣದಲ್ಲಿ ಉಳಿದರು. ಇಷ್ಟಾದ ಮೇಲೆ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಸುಪ್ರೀತಾ ಅವರು ಸಾಗುವಳಿ ಭೂಮಿಯಲ್ಲಿ ನೆಟ್ಟಿದ್ದ ಸುಮಾರು 2 ಸಾವಿರ ಅಡಕೆ ಸಸಿಯನ್ನು ಧ್ವಂಸ ಮಾಡಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳ ಪರಿಶೀಲನೆ ಮಾಡಿದ ಕಿಮ್ಮನೆ ರತ್ನಾಕರ್ ಅವರು, ಈ ಎಲ್ಲ ದುರಾವಸ್ಥೆಗೆ ಶಾಸಕ ಆರಗ ಜ್ಞಾನೇಂದ್ರ ಅವರೇ ಕಾರಣ ಅವರ ಕುಮ್ಮಕ್ಕಿನಿಂದ ಬಡ ಮಹಿಳೆಯ ಫಸಲು ಹಾಳು ಮಾಡಲಾಗಿದೆ. ಆಡಳಿತದ ಕೈಗೊಂಬೆಯಾಗಿರುವ ಅರಣ್ಯಾಧಿಕಾರಿಗಳನ್ನು ಅಮಾನತು ಮಾಡುವ ತನಕ ಏಳುವುದಿಲ್ಲ ಎಂದು ಕೊರೆವ ಚಳಿಯಲ್ಲಿಯೇ ಧರಣಿ ಆರಂಭಿಸಿದ್ದಾರೆ.
ನಾನು ಕಾರಣ ಅಲ್ಲ:
ಇತ್ತ ವಿಷಯ ಗಂಭೀರವಾಗುತ್ತಿದ್ದಂತೆ ಶಾಸಕ ಆರಗ ಜ್ಞಾನೇಂದ್ರ ಅವರು, ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ. ಅರಣ್ಯ ಇಲಾಖೆ ಕ್ರಮ ಖಂಡನೀಯ. ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮಕ್ಕೆ ಅರಣ್ಯ ಮಂತ್ರಿಗಳ ಜತೆ ಮಾತನಾಡಿದ್ದೇನೆ. ಮತ್ತು ನಾಳೆ ಮುಖ್ಯಮಂತ್ರಿ ಬಳಿ ಮಾತನಾಡುವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಬತ್ತದೆ,,,ಹೋತದೆ…ಆದ್ರೆ ಆ ಬಡವಿ ಮನೆ ಅಡಕೆ ಗಿಡ ಎಂತ ಮಾಡಿತ್ತು ಎಂಬ ಚರ್ಚೆ ಈಗ ಆರಗ ತುಂಬಾ ಕೇಳಿಬರುತ್ತಿದೆ.
previous post
next post