ಶಿವಮೊಗ ಜಿಲ್ಲೆಯ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟು ಶೇ.೮೩ ಮತದಾನವಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ೧,೨೧,೨೨೭ ಮತದಾರರ ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೆ.೮೪.೯೧ ರಷ್ಟು ಮತದಾನವಾಗಿದೆ.
ಭದ್ರಾವತಿಯಲ್ಲಿ ೯೮,೫೯೧ ಮಂದಿ ಮತದಾನ ಮಾಡಿದ್ದು,ಒಟ್ಟಾರೆ ಶೇ.೮೨.೬೦ ರಷ್ಟು ಮತದಾನವಾಗಿದೆ.ತೀರ್ಥಹಳ್ಳಿಯಲ್ಲಿ ೮೮,೯೭೨ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಿದ್ದು ಶೇ.೮೧.೩೩ ರಷ್ಟು ಮತದಾನವಾಗಿದೆ. ಶೇಕಡಾವಾರು ಮತದಾನದ ಲೆಕ್ಕಾಚಾರ ಮುಂದುವರಿದಿದ್ದು, ಇದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆ ಮತದಾದ ಸಂಪೂರ್ಣ ಶಾಂತಿಯುತವಾಗಿತ್ತು. ಗೊಂದಿ ಚಟ್ನಹಳ್ಳಿಯಲ್ಲಿ ಅಭ್ಯರ್ಥಿಯೊಬ್ಬರು ತಮ್ಮ ಚಿನ್ಹೆ ಮೇಜು ಎಂದು ಪ್ರಚಾರ ಮಾಡಿದ್ದರು. ಆದರೆ ಮತಪತ್ರದಲ್ಲಿ ಅದು ಬೆಂಚ್ ಆಗಿದ್ದರಿಂದ ಅವರು ಮತದಾರರಿಗೆ ಪುನಃ ಮನವರಿಕೆ ಮಾಡಿಕೊಡಬೇಕಾಯಿತು.
ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮತದಾರರಿಗೆ ಹಂಚಲು ಮಾಡಿಕೊಂಡಿದ್ದ ಚಿತ್ರಾನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ೩೨೮೪ ಅಭ್ಯರ್ಥಿಗಳ ಭವಿಷ್ಯ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಒಟ್ಟು ೮೨ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡನೇ ಹಂತದ ಚುನಾವಣೆ ಡಿ.೨೭ ರಂದು ನಡೆಯಲಿದ್ದು, ಡಿ.೩೦ ರಂದು ಮತ ಎಣಿಕೆ ನಡೆಯಲಿದೆ.