ಮೇಲು ಕೀಳು, ಬಡವ ಬಲ್ಲಿದ, ಗಂಡು ಹೆಣ್ಣು ಎನ್ನುವ ತಾರತಮ್ಯ ಹೆಚ್ಚಾಗಿ ಅಹಿಸಹಿಷ್ಣುತೆ ತಾಂಡವಾಡುತ್ತಿರುವ ಹೊತ್ತಿನಲ್ಲಿ ವಿವಿಧತೆಯಲ್ಲಿ ಏಕತೆ ಕಾಣಲು ರಾಮ ಮಂದಿರ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ ಎಂದು ಶಿವಮೊಗ್ಗ ಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಸೊರಬ ತಾಲೂಕು ಜಡೆ ಮಠದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ ವತಿಯಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಡಿಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಸಮರ್ಪಣಾ ನಿಧಿ ಸಂಗ್ರಹಕ್ಕಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಧು ಸಂತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಮಹಾಪುರುಷರು ಅವತರಿಸಿದ ನಾಡಿನಲ್ಲಿ ಪ್ರತಿಯೊಂದು ಧರ್ಮ ಸ್ಥಾಪಕರು ಲೋಕ ಕಲ್ಯಾಣವನ್ನು ಬಯಸಿದ್ದರು. ಭಾರತೀಯರ ನ್ಯೂನತೆಗಳ ಪರಿಹಾರಕ್ಕಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ರಾಮ ಮಂದಿರ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಲಿದೆ. ೧೨ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪ ಸ್ಥಾಪಿಸಿ ಪ್ರಜಾಪ್ರಭುತ್ವದ ಘನತೆ ಹೆಚ್ಚಿಸಿದ್ದಾರೆ. ಅವಕಾಶಗಳಿಂದ ವಂಚಿತಗೊAಡಿರುವ ಸಮುದಾಯಕ್ಕೆ ಅನುಭವ ಮಂಟಪದಲ್ಲಿ ಚರ್ಚೆಗೊಳ್ಳುತ್ತಿದ್ದ ವಿಚಾರಧಾರೆಗಳು ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ವ್ಯಕ್ತಗೊಳ್ಳುತ್ತಿದ್ದವು. ಅದೇ ಮಾದರಿಯಲ್ಲಿ ದೇಶದ ಸಂಸತ್ತು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ರಾಮ ಮಂದಿರ ನಿರ್ಮಾಣಕ್ಕಾಗಿ ಕನಸು ಕಂಡಿದ್ದ ಶತ ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನ ಇಡೀ ಮನುಕುಲದ ಬದುಕನ್ನು ರೂಪಿಸುವ ವ್ಯವಸ್ಥೆಯಾಗಿದ್ದು, ಇದಕ್ಕೆ ಎಲ್ಲ ಮಠಾಧೀಶರ ಬೆಂಬಲ ಇದೆ ಎಂದು ತಿಳಿಸಿದರು.
ಮನುಷ್ಯ ತನ್ನ ಬದುಕು ರೂಪಿಸಿಕೊಳ್ಳಲು ಮಠ ಮಂದಿರಗಳ ಸ್ಥಾಪನೆ ಆಗುವುದು ಮುಖ್ಯವಾಗಿದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಜೀವನದಲ್ಲಿ ವ್ಯಕ್ತಿ ತನಗೆ ಬರುವ ಕಷ್ಟಗಳನ್ನು ಸಹಿಸಿಕೊಂಡು ಬೇರೆಯವರೆಗೆ ಒಳಿತು ಬಯಸಿದರೆ ಆತ ದೇವರಾಗಿ ಉಳಿಯಬಲ್ಲ. ಈ ನಿಟ್ಟಿನಲ್ಲಿ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸಂಸ್ಕಾರ ಮತ್ತು ಸಂಸ್ಕೃತಿ ಬಗ್ಗೆ ಗೌರವ ಹೊಂದಿದಾಗ ಮಾತ್ರ ಸಂಕುಚಿತ ಭಾವನೆಯಿಂದ ಹೊರಬಂದು ವಿಶಾಲ ಮನೋಭಾವನೆಯಿಂದ ಬದುಕು ಮುನ್ನಡೆಸಬಹುದಾಗಿದೆ ಎಂದರು.
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಶಾಂತ ಯೋಗಿ ಆಶ್ರಮದ ಮಹಾಬಲೇಶ್ವರ ಸ್ವಾಮೀಜಿ, ಶಿವಮೊಗ್ಗ ಬಸವ ಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಗರ್ತಿಕೇರಿ ನಿಟ್ಟೂರಿನ ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಚೌಕಿ ಮಠದ ನೀಲಕಂಠ ಸ್ವಾಮೀಜಿ, ಲಕ್ಕವಳ್ಳಿ ಮಠದ ವೃಷಭಸೇನ ಭಟ್ಟರಾಕ ಸ್ವಾಮೀಜಿ, ಶಾಂತಪುರ ಮಠದ ಶಿವಾನಂದ ಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಸ್ವಾಮೀಜಿ, ಮೂಡಿ ಮಠದ ಸದಾಶಿವ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಬಸವಾನಂದ ಸ್ವಾಮೀಜಿ, ಶಿಕಾರಿಪುರ ಮಾತೆ ಶರಣಾಂಬಿಕೆ, ವೈದ್ಯ ಡಾ.ಜ್ಞಾನೇಶ್ ಸೇರಿದಂತೆ ವಿವಿಧ ಮಠಾಧೀಶರು, ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳದ ಕಾರ್ಯಕರ್ತರಿದ್ದರು.
previous post
next post