ಶಿವಮೊಗ್ಗ: ಮಾರ್ಚ್, ಏಪ್ರಿಲ್ ಒಳಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಮುಗಿಯುವಂತೆ ಕ್ರಮಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಸೂಚನೆ ನೀಡಿದ್ದಾರೆ.
ಶಿವಮೊಗ್ಗದ ಗೋಪಾಲಗೌಡ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ಸಂಜೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುವ ಯೋಗ ಭವನ ಸೇರಿದಂತೆ ಹತ್ತಾರು ಹೊಸ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಶಿವಮೊಗ್ಗ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಸ್ಮಾರ್ಟ್ ಸಿಟಿ ಮೂಲಕ ವಿವಿಧ ಯೋಜನೆ ನೀಡಲಾಗಿದೆ. ಕೋವಿಡ್ ಮತ್ತು ಮಳೆಗಾಲದಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಆದರೆ ಮುಂದಿನ ನಾಲ್ಕೈದು ತಿಂಗಳಲ್ಲಿ ಅದಿಕಾರಿಗಳು ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕೆಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಹೊರತಾಗಿ ನಗರದ ಕೆಲವು ಬಡಾವಣೆಗಳಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ ಎಂಬ ಮನವಿಯ ಹಿನ್ನೆಲೆಯಲ್ಲಿ ಇದಕ್ಕೆ ಸುಮಾರು ೨೫೦ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಕೋರಿದ್ದೇನೆ. ಮುಂಬರುವ ಬಜೆಟ್‌ನಲ್ಲಿ ಈ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ವಿವರಿಸಿದರು.
ರಾಜ್ಯದಲ್ಲಿ ಬಳ್ಳಾರಿ, ವಿಜಯಪುರ ಮತ್ತು ಗುಲ್ಬರ್ಗಾ ಪಾಲಿಕೆಗಳು ಸ್ಮಾರ್ಟ್ ಸಿಟಿ ಆಗಬೇಕಿದೆ. ಈ ಬಗ್ಗೆ ಕೇಂದ್ರ ನಗರಾಭಿವೃದ್ದಿ ಸಚಿವರ ಜೊತೆಗೆ ಮತ್ತು ಪ್ರಧಾನಿಯವರಲ್ಲೂ ಮನವಿ ಮಾಡಿ, ಸ್ಮಾರ್ಟ್ ಸಿಟಿ ಪಟ್ಟಿಗೆ ಇವುಗಳನ್ನು ಸೇರಿಸಿ ಹಣ ಒದಗಿಸಬೇಕೆಂದು ಕೋರಿದ್ದೇನೆ. ಇವು ಜಾರಿಯಾದಲ್ಲಿ ರಾಜ್ಯದ ಎಲ್ಲಾ ೭ ಪಾಲಿಕೆಗಳು ಸ್ಮಾರ್ಟ್ ಸಿಟಿಗೆ ಒಳಪಟ್ಟಂತಾಗುತ್ತದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಮತ್ತು ಇನ್ನಿತರ ಕೆಲವು ಯೋಜನೆಗಳ ಮೂಲಕ ಸರಕಾರಿ ಶಾಲೆಗಳನ್ನು ಸ್ಮಾರ್ಟ್ ಆಗಿ ಮಾಡಲಾಗಿದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡುವಂತಾಗಿವೆ. ಇಂತಹ ಕೆಲಸ ಇನ್ನೂ ಹೆಚ್ಚಬೇಕಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆರೆಗಳ ಸಂರಕ್ಷಣೆಯೂ ಇದೆ. ನಗರದೊಳಗಿನ ಕೆಲವು ಕೆರೆಗಳ ಅಭಿವೃದ್ಧಿ ಮತ್ತು ರಕ್ಷಣೆ ಮಾಡಲಾಗುವುದು. ತುಂಗಾ ನದಿಗೆ ಮಲೀನ ನೀರು ಬಿಡದಂತೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಗರ ಸುಂದರವಾಗಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ರಸ್ತೆ, ಚರಂಡಿ ಎಲ್ಲವುಗಳ ಅಭಿವೃದ್ಧಿಗೆ ಗಮನ ಕೊಡಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ರುದ್ರೇಗೌಡ, ಮೇಯರ್ ಸುವಣಾ ಶಂಕರ್, ಡಿ ಎಸ್ ಅರುಣ್, ಜ್ಯೋತಿಪ್ರಕಾಶ್,ಜ್ಜಾನೇಶ್ವರ್, ಎಚ್.ಸಿ.ಯೋಗೀಶ್, ಮೊದಲಾದವರಿದ್ದರು.
previous post
next post