ಶಿವಮೊಗ್ಗ,ಡಿ.೩೦: ಅಮ್ಮನ ಅಂತ್ಯಸಂಸ್ಕಾರಕ್ಕೆ ಬರಲಾಗಲಿಲ್ಲ, ಕಾರ್ಯ ಮಾಡಿ ಸದ್ಗತಿಕೊಡಿಸೋಣ ಎಂದು ದೂರದ ಬ್ರಿಟನ್‌ನಿಂದ ಬಂದಿದ್ದ ಆ ಕುಟುಂಬದ ಜತೆಯಲ್ಲಿಯೇ ಮಹಾಮಾರಿ ರೂಪಾಂತರಿ ಕೊರೊನವೂ ಬರತ್ತೆ ಎಂಬ ನಿರೀಕ್ಷೆಯಿರಲಿಲ್ಲ. ಮನೆಯಲ್ಲಿ ಅಮ್ಮನ ಕಾರ್ಯಮಾಡಬೇಕಾಗಿದ್ದ ಮಗನಿಗೆ ಮಡದಿ ಮಕ್ಕಳೊಂದಿಗೆ ಐಸೋಲೇಷನ್‌ನಲ್ಲಿ ಇರಬೇಕಾಗಿ ಬಂದವರ ಕತೆ ಇದು.
ಹೌದು. ರಾಜ್ಯದಲ್ಲಿ ಪತ್ತೆಯಾದ ಹೈಬ್ರಿಡ್ ಕೊರೊನ ಪ್ರಕರಣಗಳಲ್ಲಿ ನಾಲ್ಕು ಶಿವಮೊಗ್ಗದವೇ ಎನ್ನುವುದು ಅಚ್ಚರಿಯ ಸಂಗತಿ. ನಾಲ್ಕು ತಿಂಗಳ ಹಿಂದೆ ಅಮ್ಮ ತೀರಿಕೊಂಡಿದ್ದರು. ಆ ಸಮಯದಲ್ಲಿ ಲಾಕ್ಡೌನ್ ಮತ್ತು ಕೊರೊನ ಹೆಚ್ಚಾಗಿದ್ದ ಕಾರಣ ಮಗ ತವರಿಗೆ ಬರಲಿಲ್ಲ. ಈಗ ಹೇಗೂ ಎಲ್ಲ ಒಂದು ಹಂತಕ್ಕೆ ಬಂದಿದೆ ಎಂದು ಊರಿಗೆ ಬಂದರೆ ಮತ್ತೊಂದು ಸಂಕಟ ಎದುರಾಗಿದೆ. ಈ ಕುಟುಂಬದ ಟ್ರಾವೆಲ್ ಹಿಸ್ಟರಿ ನೋಡಿದರೆ ಈ ರೂಪಾಂತರಿ ಭೂತ ಮತ್ತೆಲ್ಲಿ ಸೇರಿಕೊಂಡಿದೆಯೋ ಎಂಬ ಅನುಮಾನ ಮೂಡದೇ ಇರದು.
ಮಡದಿ ಇಬ್ಬರು ಮಕ್ಕಳೊಂದಿಗೆ ಡಿ.೨೧ ಕ್ಕೆ ಬ್ರಿಟನ್ ಬಿಟ್ಟು ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ನೇರ ಶಿವಮೊಗ್ಗಕ್ಕೆ ಬರಲಿಲ್ಲ. ಅಲ್ಲಿಂದ ಟ್ಯಾಕ್ಸಿ ಮಾಡಿಸಿಕೊಂಡು ಹೆಂಡತಿಯ ತವರು ಮನೆ ತರೀಕೆರೆಗೆ ಬಂದಿದ್ದಾರೆ. ಒಂದು ರಾತ್ರಿ ಉಳಿದು ಮತ್ತೆ ಟ್ಯಾಕ್ಸಿ ಮೂಲಕ ಡಿ.೨೨ ಕ್ಕೆ ಶಿವಮೊಗ್ಗದ ಸಾವರ್ಕರ್ ನಗರದ ಮನೆಗೆ ಬಂದಿದ್ದಾರೆ. ಈ ಸಂದರ್ಭ ಕೊರೊನ ಪರೀಕ್ಷೆ ಮಾಡಿದಾಗ ಎಲ್ಲ ನಾಲ್ಕೂ ಜನರಿಗೂ ಕೊರೊನ ಪಾಸಿಟವ್ ವರದಿ ಬಂದಿದೆ. ಆದರೆ ಇದು ರೂಪಾಂತರಿ ಕೊರೊನ ಎಂಬುದು ಮಾತ್ರ ಗೊತ್ತಿರಲಿಲ್ಲ. ಸ್ಯಾಂಪಲ್‌ಗಳನ್ನು ಪುಣೆ ಪ್ರಯೋಗಾಲಯಕ್ಕೆ ಕಳಿಸಿದ್ದ ಜಿಲ್ಲಾಡಳಿತ ಪತಿ-ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಸ್ಪೆಷಲ್ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿತ್ತು.
ಆರೋಗ್ಯ ಸಚಿವ ಡಾ.ಸುಧಾಕರ್ ಬೆಂಗಳೂರಿನಲ್ಲಿ ರೂಪಾಂತರಿ ಕೊರೊನ ದೃಢಪಟ್ಟ ಪ್ರಕರಣಗಳ ಮಾಹಿತಿ ನೀಡುವಾಗ ಶಿವಮೊಗ್ಗದ ಕೇಸುಗಳನ್ನು ಉಲ್ಲೇಖಿಸಿದ್ದಾರೆ. ಕುಟುಂಬ ಪ್ರಯಾಣಿಸಿದ ಟ್ಯಾಕ್ಸಿ ಚಾಲಕ ಹಾಗೂ ತರೀಕೆರೆ ಮತ್ತು ಶಿವಮೊಗ್ಗದ ಕುಟುಂಬದ ಪ್ರಾಥಮಿಕ ಸಂಪರ್ಕಿತರನ್ನೂ ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ ಕೊರೊನ ನೆಗೆಟಿವ್ ಬಂದಿದ್ದು,ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.ಕೊರೊನ ಎಂಬ ಮಾಯೆ ಯಾವ ರೂಪದಲ್ಲಿ ಬಂತೊ ಗೊತ್ತಿಲ್ಲ ಆದರೆ ಬ್ರಿಟನ್‌ನಿಂದ ಮಲೆನಾಡಿನ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ReplyForward |