ಶಿವಮೊಗ್ಗ ಸರ್ಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮಾಲಿಕತ್ವದಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಿರುವ ನಿವಾಸಿಗಳಿಗೆ ಸ್ವತ್ತಿನ ಹಕ್ಕುಪತ್ರ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ ಜಿಲ್ಲೆಯ 18700 ಕುಟುಂಬಗಳಿಗೆ ಇದರ ಪ್ರಯೋಜನವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಘೋಷಿತ ಸರ್ಕಾರಿ ಮಾಲಿಕತ್ವದ 25 ಹಾಗೂ ಸ್ಥಳೀಯ ಸಂಸ್ಥೆ ಮಾಲಿಕತ್ವದಲ್ಲಿರುವ 10 ಕೊಳಚೆ ಪ್ರದೇಶಗಳು ಸೇರಿ ಒಟ್ಟು 35 ಕೊಳಚೆ ಪ್ರದೇಶಗಳಿಗೆ ಸ್ವತ್ತಿನ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಜನವರಿ 3ರಿಂದ ಕೊಳಚೆ ಪ್ರದೇಶದಲ್ಲಿರುವ ಮನೆಗಳಿಗೆ ಮನೆ ಸಂಖ್ಯೆಯನ್ನು ನಮೂದಿಸುವ ಕಾರ್ಯ ಪ್ರಾರಂಭವಾಗಲಿದೆ. ಎರಡನೇ ಹಂತದಲ್ಲಿ ಮನೆಗಳ ಸಮೀಕ್ಷೆ ಕಾರ್ಯ ಜನವರಿ 6ರಿಂದ ಪ್ರಾರಂಭವಾಗಲಿದೆ. ಹಕ್ಕುಪತ್ರ ನೀಡುವ ಪ್ರಕ್ರಿಯೆಯನ್ನು 3-4 ತಿಂಗಳ ಒಳಗಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಸರ್ವೆ ಕಾರ್ಯಕ್ಕೆ ಸಿಬ್ಬಂದಿಗಳು ಪ್ರತಿ ಮನೆಗಳಿಗೆ ಭೇಟಿ ನೀಡಲಿದ್ದು, ಅವರಿಗೆ ನಿಖರವಾದ ಮಾಹಿತಿ ಹಾಗೂ ದಾಖಲಾತಿಗಳನ್ನು ನೀಡಿ ಸಹಕರಿಸಬೇಕು. ಆಧಾರ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು ಮತ್ತು ಜಾತಿ ಪ್ರಮಾಣ ಪತ್ರವನ್ನು ಸರ್ವೆ ಸಂದರ್ಭದಲ್ಲಿ ಒದಗಿಸಬೇಕು. 10ಸಾವಿರ ರೂ. ನೋಂದಣಿ ಶುಲ್ಕವನ್ನು ಭರಿಸಬೇಕು. ಸ್ಥಳೀಯ ಕಾರ್ಪೊರೇಟರ್‍ಗಳು ಸರ್ವೆ ಕಾರ್ಯಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಕೊಳಚೆ ಪ್ರದೇಶ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಈಗ ಕೈಗೂಡುತ್ತಿದ್ದು, ಹಕ್ಕುಪತ್ರ ಲಭಿಸಿದ ಬಳಿಕ ಬ್ಯಾಂಕ್‍ಗಳಿಂದ ಹಣಕಾಸು ನೆರವು ಪಡೆದು ಸ್ವಂತ ಮನೆಯನ್ನು ನಿರ್ಮಿಸಲು ಸಾಧ್ಯವಾಗಲಿದೆ. ಎರಡನೇ ಹಂತದಲ್ಲಿ ಖಾಸಗಿ ಜಮೀನಿನಲ್ಲಿ ನಿರ್ಮಾಣಗೊಂಡಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 163 ಘೋಷಿತ ಕೊಳಚೆ ಪ್ರದೇಶಗಳಿವೆ. ಇದರಲ್ಲಿ ಸರ್ಕಾರಿ 65, ಖಾಸಗಿ 41, ಮಂಡಳಿ 2, ವಿ.ಐ.ಎಸ್.ಎಲ್ 5 ಮತ್ತು ಎಂ.ಪಿ.ಎಂನ 4 ಕೊಳಚೆ ಪ್ರದೇಶಗಳು ಸೇರಿವೆ. ಶಿವಮೊಗ್ಗ ನಗರದಲ್ಲಿ 25ಸರ್ಕಾರಿ, 10 ಮಹಾನಗರ ಪಾಲಿಕೆ ಮಾಲಿಕತ್ವದ ಕೊಳಚೆ ಪ್ರದೇಶಗಳಿದ್ದು, 5700 ಮನೆಗಳಿವೆ ಎಂದು ಮಾಹಿತಿ ನೀಡಿದರು.
ಸಚಿವರ ಸ್ಪಷ್ಟನೆ: ಚಾನೆಲ್‍ಗಳ ಮೇಲೆ ಮನೆಗಳನ್ನು ನಿರ್ಮಿಸಿರುವವರಿಗೆ ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಯಾವುದೇ ಕಾರಣಕ್ಕೂ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಉಪಸ್ಥಿತರಿದ್ದರು.
*