ಮಲೆನಾಡಿನಲ್ಲಿ ಅಕಾಲಿಕವಾಗಿ ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಶಿವಮೊಗ್ಗ ಚಿಕ್ಕಮಗಳೂರು ಜಲ್ಲೆಯ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಮಳೆ ಸುರಿದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರದಿಂದಲೂ ಅಲ್ಲಲ್ಲಿ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗೆ ತೊಂದರೆಯುಂಟಾಗಿದೆ.
ಅಡಕೆ ಹಾಗೂ ಭತ್ತದ ಕೊಯ್ಲಿಗೆ ಕೆಲಭಾಗದಲ್ಲಿ ತೊಂದರೆಯಾಗಿದ್ದರೆ, ಶುಂಠಿ ಕಣಗಳಿಗೂ ತೊಂದರೆಯಾಗಿದ್ದು, ಇದರ ಪ್ರಭಾವ ಹಸಿ ಶುಂಠಿ ರೇಟಿನ ಮೇಲೆಯೂ ಬೀರಿದೆ. ಶಿವಮೊಗ್ಗ ನಗರದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ರಾಜಾಕಾಲುವೆ ಸಮೀಪ ಇರುವ ಹಲವು ಏರಿಯಾಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹೊಸಮನೆ ಬಡಾವಣೆಯಲ್ಲಿ ಕೆಲ ಮನೆಗಳಲ್ಲಿ ರಾತ್ರಿಯಿಡೀ ಮೊಣಕಾಲು ಮಟ್ಟ ನೀರು ನಿಂತಿತ್ತು. ಇದರಿಂದ ವಯೋವೃದ್ಧರು, ಮಕ್ಕಳು ನಿದ್ರೆ ಮಾಡದೆ ಕಾಲ ಕಳೆಯುವಂತಾಯಿತು.
ಕಾರ್ಪೊರೇಟರ್ ಭೇಟಿ
ಹೊಸಮನೆ ಬಡಾವಣೆಯ ಕಾರ್ಪೊರೇಟರ್ ರೇಖಾ ರಂಗನಾಥ್ ಅವರು ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಗರಪಾಲಿಕೆಗೆ ಹಲವು ಬಾರಿ ಮನವಿ ನೀಡಿದ್ದರೂ ರಾಜಾಕಾಲುವೆ ದುರಸ್ತಿಯಾಗಿಲ್ಲ. ಅಲ್ಲಿಂದ ನೀರು ಸರಾಗವಾಗಿ ಹೋಗದ ಕಾರಣ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಬಗ್ಗೆ ಮತ್ತೆ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಕಾಂಗ್ರೆಸ್ ಮುಖಂಡ ಕೆ.ರಂಗನಾಥ್ ಹೇಳಿದ್ದಾರೆ.