ಭದ್ರಾವತಿ ನಗರದಲ್ಲಿ ಆರಂಭವಾಗಲಿರುವ ರ್ಯಾಪಿಡ್ ಆಕ್ಷನ್ ಫೋರ್ಸ್ ಘಟಕ ಸ್ಥಾಪನೆಯ ಶಂಕು ಸ್ಥಾಪನಾ ಸಮಾರಂಭ ಜ.17ರ ಬದಲಾಗಿ ಜ.16ರಂದೇ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜ.16ರಂದು ಮಧ್ಯಾಹ್ನ 12.30 ಗಂಟೆಗೆ ಭೂಮಿ ಪೂಜೆ ನಡೆಯಲಿದ್ದು, 1 ಗಂಟೆಯಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದಲ್ಲಿ 10 ಸಾವಿರ ಮಂದಿ ಸೇರುವ ನಿರೀಕ್ಷೆಯಿದ್ದು, ಎಲ್’ಇಡಿ ಸ್ಕೀನ್’ಗಳನ್ನು ಅಳವಡಿಸಲಾಗುವುದು ಎಂದರು.ಈಗಾಗಲೇ ಆರ್’ಎಎಫ್ ಪಡೆಗಳು ನಗರಕ್ಕೆ ಆಗಮಿಸಿದ್ದು, ಜ.16ರಂದು ಕಾರ್ಯಕ್ರಮವಾದ ನಂತರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈ ಪಡೆಗಳು ಭದ್ರತೆ ಮಾತ್ರವಲ್ಲದೇ ಸಾಮಾಜಿಕ ಸೇವಾ ಕಾರ್ಯದಲ್ಲೂ ಸಹ ತೊಡಗಿಸಿಕೊಳ್ಳಲಿದ್ದಾರೆ.ಆರ್’ಎಎಫ್ ಘಟಕ ಭದ್ರಾವತಿಯಲ್ಲಾಗುತ್ತಿರುವುದು ಜಿಲ್ಲೆಗೇ ಹೆಮ್ಮೆ ಸಂಗತಿ. ಇದು ಮುಂದಿನ ದಿನಗಳಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಎಸ್. ರುದ್ರೇಗೌಡ, ಪ್ರಮುಖರಾದ ಎಸ್. ದತ್ತಾತ್ರಿ, ಪವಿತ್ರಾ ರಾಮಯ್ಯ, ಮೇಘರಾಜ್, ಮಂಗೋಟೆ ರುದ್ರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.