Malenadu Mitra
ರಾಜ್ಯ ಶಿವಮೊಗ್ಗ

ಮಹಾದುರಂತಕ್ಕೆ ಹೊಣೆ ಯಾರು ?, ಬಡವರ ಜೀವಕ್ಕೆ ಬೆಲೆ ಇಲ್ಲವೆ?

ಮಲೆನಾಡಿನಲ್ಲಿ ಮಹಾ ದುರಂತವೊಂದು ನಡೆದು ಹೋಗಿದೆ. ಘಟನೆಯಲ್ಲಿ ಐದು ಮಂದಿ ನಿಧನರಾಗಿರುವುದು ಖಚಿತಪಟ್ಟಿದೆ ಎನ್ನಲಾಗಿದೆ. ಆದರೆ ದುರಂತ ಸಂಭವಿಸಿದ ಪ್ರದೇಶದಲ್ಲಿ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಸಾವು ನೋವುಗಳ ಸಂಖ್ಯೆ ನಿಕರವಾಗಿ ತಿಳಿದು ಬಂದಿಲ್ಲ. ಬೆಂಗಳೂರು ಹಾಗೂ ಮಂಗಳೂರಿನಿಂದ ಬಾಂಬ್ ಪರೀಕ್ಷೆ ಮತ್ತು ನಿಷ್ರಿಯ ದಳ ಬ್ಯಾಲೆಸ್ಟಿಕ್ ತಜ್ಞರು, ಎಫ್‌ಎಸ್‌ಎಲ್ ತಜ್ಞರು ಸ್ಥಳಕ್ಕೆ ಬಂದ ಬಳಿಕ ನಿಖರ ಮಾಹಿತಿ ದೊರೆಯುವ ನಿರೀಕ್ಷೆ ಇದೆ. ಸುರಕ್ಷತಾ ಕ್ರಮ ಅನುಸರಿಸದೆ ಉಳ್ಳವರ ಹಣದಾಸೆಗೆ ಬಡ ಕೂಲಿಕಾರ್ಮಿಕರು ಬಲಿಯಾಗಿದ್ದು, ಅವರ ಜೀವಕ್ಕೆ ಬೆಲೆಯೇ ಇಲ್ಲವೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಜಿಲೆಟಿನ್ ಸ್ಫೋಟ ಘಟನೆಯು ದೇಶವ್ಯಾಪಿ ಸುದ್ದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷ ಮುಖಂಡ ರಾಹುಲ್ ಗಾಂಧಿ , ಮುಖ್ಯಮಂತ್ರಿಯಡಿಯೂರಪ್ಪ ಅವರು ಘಟನೆ ಬಗ್ಗೆ ನೋವು ವ್ಯಕ್ತಮಾಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ ಅವರು ಭೇಟಿ ನೀಡಿ ರಕ್ಷಣಾ ಕಾರ್ಯ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂಡಾ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದೆ. ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡಲಿದ್ದು, ಘಟನಾ ಸ್ಥಳ ಪರಿಶೀಲನೆ ಮಾಡುವ ನಿರೀಕ್ಷೆ ಇದೆ. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮರ್, ಎಸ್ಪಿ ಶಾಂತರಾಜ್ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಬಾಂಬ್ ನಿಷ್ಕ್ರಿಯ ತಂಡ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಶೋಧ ಕಾರ್ಯ ಆರಂಭಿಸಿದೆ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ರಾಘವೇಂದ್ರಭೇಟಿ

ಘಟನೆಗೆ ಹೊಣೆ ಯಾರು ?
ಶಿವಮೊಗ್ಗದಲ್ಲಿ ರಾತ್ರಿ ಕೇಳಿಬಂದ ರಣಭೀಕರ ಶಬ್ಧಕ್ಕೆ ಇಡೀ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಜಿಲೆಟಿನ್ ಸ್ಫೋಟದಿಂದಲೇ ಆ ಶಬ್ಧ ಮತ್ತು ಅನಾಹುತಗಳು ಸಂಭವಿಸಿದವೆ ಅಥವಾ ಭೂ ಕಂಪನದಿಂದಾಗಿ ಆ ಸ್ಫೋಟ ಸಂಭವಿಸಿತೊ ಎಂಬ ಗೊಂದಲಗಳು ಜನರಲ್ಲಿ ಮೂಡಿವೆ. ಇದಕ್ಕೆ ಪೂರಕ ಎಂಬಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಮೂರು ಜಿಲ್ಲೆಗಳ ವ್ಯಾಪ್ತಿಗೆ ಕೇಳಿದ ಭಾರೀ ಶಬ್ದ ಈ ಸ್ಫೋಟದಿಂದ ಆಗಿರಲು ಸಾಧ್ಯವಿಲ್ಲ. ಈಗಲೇ ಯಾವುದನ್ನೂ ನಿಖರವಾಗಿ ಹೇಳಲಾಗದು. ತಜ್ಞರು ಬಂದು ಸೂಕ್ತ ತನಿಖೆ ಮತ್ತು ಪರಿಶೀಲನೆ ಮಾಡಿದ ಬಳಿಕ ಸತ್ಯ ಗೊತ್ತಾಗಲಿದೆ ಎಂದಿದ್ದಾರೆ. ಒಟ್ಟಾರೆಯಾಗಿ ಶಿವಮೊಗ್ಗ ನಗರದಲ್ಲಿ ನೂರಾರು ಮನೆಗಳಿಗೆ ಹಾನಿಯಾದ ಬಗ್ಗೆಯೂ ವರದಿಯಾಗಿದೆ. ಘಟನೆ ಸಂಭವಿಸಿದ ಹುಣಸೋಡು ಹಾಗೂ ಅಬ್ಬಲಗೆರೆ ಗ್ರಾಮಗಳ ಸುತ್ತಮುತ್ತಲ ಜನರಲ್ಲಿ ಈಗಲೂ ಜೀವಭಯ ಮನೆ ಮಾಡಿದೆ.
ಅಕ್ರಮಗಳ ಪೋಷಣೆ:
ಶಿವಮೊಗ್ಗ ನಗರದ ಹೊರವಲಯದ ಅಬ್ಬಲಗೆರೆ ಸೋಮಿನಕೊಪ್ಪ, ಕಲ್ಲಗಂಗೂರು, ಬಸವನಗಂಗೂರು, ಮತ್ತೋಡು, ಹುಣಸೋಡು, ಬಸವನಗಂಗೂರು ಮುಂತಾದ ಊರುಗಳಲ್ಲಿ ದಶಕಗಳಿಂದ ಅಕ್ರಮ ಹಾಗೂ ಸಕ್ರಮ ಕಲ್ಲುಗಣಿಗಾರಿಕೆ ಮತ್ತು ಕ್ರಷರ್‌ಗಳು ಅವ್ಯಾಹತವಾಗಿ ನಡೆಯುತ್ತಿದೆ. ಪರಿಸರ ಹೋರಾಟಗಾರರು ಸ್ಥಳೀಯ ನಿವಾಸಿಗಳು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅದು ಅರಣ್ಯರೋದನವಾಗಿದೆ. ತೀರಾ ಒತ್ತಡ ಬಂದಾಗ ನಿಲ್ಲಿಸಿದಂತೆ ಮಾಡುವುದು ಮತ್ತೆ ಕಲ್ಲಗಣಿಗಾರಿಕೆಯಿಂದಾಗಿ ಶಿವಮೊಗ್ಗದ ಅಭಿವೃದ್ಧಿಯೇ ನಿಂತು ಹೋಯಿತೆಂದು ಬಿಂಬಿಸಿ ಮತ್ತೆ ಅಕ್ರಮ ಹಾಗೂ ಸಕ್ರಮ ಕಲ್ಲುಗಣಿ ಆರಂಭವಾಗುವಂತೆ ಮಾಡಲಾಗುತ್ತದೆ. ಇದಕ್ಕೆ ಅಧಿಕಾರದಲ್ಲಿರುವ ಜನಪ್ರತಿನಿಧಿಗಳೂ ಸಾಥ್ ನೀಡಿದ ಪ್ರಸಂಗಗಳೂ ನಡೆಯುತ್ತಿವೆ. ಈ ಎಲ್ಲ ಲೂಸ್ ಪೋಲ್‌ಗಳ ಕಾರಣ ಕಲ್ಲುಗಣಿಗಾರಿಕೆ ಮಾಡುವವರ ಅಟ್ಟಹಾಸ ಜಿಲ್ಲೆಯಲ್ಲಿ ಮಿತಿಮೀರಿದೆ ಎಂಬ ಆರೋಪಗಳು ಇವೆ.
ಅಷ್ಟು ಪ್ರಮಾಣದ ಸ್ಫೋಟಕ ಹೇಗೆ ಬಂತು?
ಗುರುವಾರ ರಾತ್ರಿ ಎಸ್‌ಎಸ್ ಕ್ರಷರ್‌ನಲ್ಲಿ ದುರಂತ ಸಂಭವಿಸಿದೆ. ಬರೀ ಕ್ರಷರ್ ಕೆಲಸ ಮಾಡುವುದಾದರೆ ಅದಕ್ಕೆ ಸ್ಫೋಟಕಗಳ ಅಗತ್ಯವಿಲ್ಲ. ಆದರೆ ಲಾರಿಗಟ್ಟಲೆ ಸ್ಫೋಟಕ ಸಾಮಗ್ರಿ ಎಲ್ಲಿಂದ ಬಂತು, ಹೇಗೆ ಬಂತು ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬ ವಿಷಯಗಳು ತನಿಖೆಯಾಗಬೇಕು. ಪ್ರಸ್ತು ಸುಧಾಕರ್ ಹಾಗೂ ಅವಿನಾಶ್ ಎಂಬ ಪಾಲುದಾರರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅಪಾರ ಪ್ರಮಾಣದ ಹಾನಿ ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟದ ಕಾರಣಕ್ಕೆ ಅಬ್ಬಲಗೆರೆ ಸುತ್ತಮುತ್ತಲ ಪ್ರದೇಶಗಳ ಅನೇಕ ಮನೆಗಳು ಚಾವಣಿಗಳಿಗೆ ಹಾನಿಸಂಭವಿಸಿದೆ. ಕಟ್ಟಡಗಳು ಮತ್ತು ರಸ್ತೆಗಳಲ್ಲಿ ಕೂಡಾ ಬಿರುಕು ಬಿಟ್ಟಿವೆ.
ಕಠಿಣ ಕ್ರಮಕ್ಕೆ ಸೂಚನೆ:
ಶಿವಮೊಗ್ಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಕರಣದ ತನಿಖೆ ಮಾಡಬೇಕು. ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮವಾಗಬೇಕು. ಅಲ್ಲಿ ಅಕ್ರಮ ನಡೆಯುತ್ತಿದ್ದರೆ, ಮಾಡುವವರ ಮತ್ತು ಅದಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಫ್ಲೆಕ್ಸ್ ಹಾಕುವವರೆ ಇವರು :
ಕಲ್ಲುಗಾಣಿಗಾರಿಕೆ ದುರಂತದ ಬಗ್ಗೆ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಕಠಿಣ ಕ್ರಮದ ಮಾತನಾಡುತ್ತಾರೆ. ಅಕ್ರಮ ಕ್ವಾರಿಗಳನ್ನು ಮುಚ್ಚಿಸಲಾಗುವುದು ಎಂದು ಹೇಳುತ್ತಾರೆ. ಆದರೆ ಅವುಗಳ ಮಾಲೀಕರುಗಳು ರಾಜಕೀಯದಲ್ಲೂ ಮುಂಚೂಣಿಯಲ್ಲಿದ್ದಾರೆ. ರಾಜಕಾರಣಿಗಳು ಹುಟ್ಟು ಹಬ್ಬದ ಸಂದರ್ಭದಲ್ಲಿ ಶುಭಕೋರಿ ಪ್ಲೆಕ್ಸ್ ಹಾಕುವವರೇ ಇವರು ಎಂಬ ಮಾತುಗಳು ಜನರಿಂದ ಕೇಳಿಬರುತ್ತಿವೆ.

ದುರಂತಕ್ಕೆ ಸರಕಾರ ಹೊಣೆ:ಕಾಂಗ್ರೆಸ್
ಕಲ್ಲುಗಣಿ ದುರಂತಕ್ಕೆ ಬಿಜೆಪಿ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳೇ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಬಿಜೆಪಿ ಸರಕಾರ ಬಂದ ಮೇಲೆ ಎಲ್ಲ ರೀತಿಯ ಮಾಫಿಯಾಗಳು ನಡೆಯುತ್ತಿವೆ. ಇವರಿಂದ ಮಲೆನಾಡಿನ ಒಳ್ಳೆ ಹೆಸರು ಹಾಳಾಗಿದೆ. ಈ ದುರಂತದ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ ಮತ್ತಿತರರು ಇದ್ದರು.

Ad Widget

Related posts

ಬಿಎಸ್‌ವೈ ಅವರಿಂದ ಬಿರುಸಿನ ಮತಬೇಟೆ ಸಾಗರ , ಸೊರಬದಲ್ಲಿ ಮಿಂಚಿನ ಸಂಚಾರ ಹಾಲಪ್ಪ, ಕುಮಾರ್ ಸಾಥ್

Malenadu Mirror Desk

ವಿದ್ಯಾರ್ಥಿಗಳಿಗೆ ಪದವಿ ಜತೆ ನೈತಿಕ ಶಿಕ್ಷಣವೂ ಬೇಕು , ವಿಶ್ರಾಂತ ಪ್ರಾಚಾರ್ಯ ಹಿಳ್ಳೋಡಿ ಕೃಷ್ಣಮೂರ್ತಿ ಅಭಿಮತ

Malenadu Mirror Desk

ಶಿವಮೊಗ್ಗ ಕೊರೊನ: 5 ಸಾವು,335 ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.