ಶಿವಮೊಗ್ಗ ತಾಲೂಕು ಹುಣಸೋಡು ಕ್ರಷರ್‌ನಲ್ಲಿ ಸಂಭವಿಸಿದ ಜಿಲಿಟಿನ್ ಸ್ಫೋಟದಲ್ಲಿ ಮೃತ ಪಟ್ಟ ಆರು ಮಂದಿಯಲ್ಲಿ ಇಬ್ಬರು ಭದ್ರಾವತಿ ತಾಲೂಕು ಅಂತರಗಂಗೆಯವರು ಎಂದು ಗುರುತಿಸಲಾಗಿದೆ. ಮಂಜುನಾಥ ಹಾಗೂ ಪ್ರವೀಣ ಎಂಬಿಬ್ಬರು ಅಂತರಗಂಗೆಯವರು. ಪವನ್ ಮತ್ತು ಜಾವಿದ್ ಎಂಬಿಬ್ಬರನ್ನು ಆಂಧ್ರಪ್ರದೇಶದ ರಾಯದುರ್ಗದವರೆಂದು ಪತ್ತೆ ಹಚ್ಚಲಾಗಿದೆ. ಉಳಿದಿಬ್ಬರು ಗುರುತು ಪತ್ತೆಯಾಗಿಲ್ಲ. ಕ್ರಷರ್‌ನಲ್ಲಿ ಗುರುವಾರ ರಾತ್ರಿ ಒಟ್ಟು ಎಂಟು ಮಂದಿ ಸಿಬ್ಬಂದಿ ಹಾಗೂ ಎರಡು ಬೊಲೆರೊ ವಾಹನ ಇದ್ದವು. ಅದರಲ್ಲಿ ಆರು ಮಂದಿ ಮೃತದೇಹ ಪತ್ತೆಯಾಗಿದ್ದು, ಒಂದು ಬೊಲೆರೊದ ಅವಶೇಷ ಪತ್ತೆಯಾಗಿದೆ. ಇನ್ನೊಂದು ವಾಹನ ಹಾಗೂ ಎರಡು ಮಂದಿ ಕಾರ್ಮಿಕರು ಎಲ್ಲಿ ಎಂಬ ಬಗ್ಗೆ ಇನ್ನೂ ಸಂದೇಹವಿದೆ. ಘಟನೆ ಬಳಿಕ ಭಯಗೊಂಡು ಉಳಿದಿಬ್ಬರು ವಾಹನದಲ್ಲಿ ಪರಾರಿಯಾಗಿದ್ದಾರೊ ಅಥವಾ ಅವರೂ ದುರಂತಕ್ಕೀಡಾದರೆ ಎಂಬ ಅನುಮಾನವಿದ್ದು, ತನಿಖೆಯಿಂದ ಗೊತ್ತಾಗಬೇಕಿದೆ.
ಉನ್ನತ ಮಟ್ಟದ ತನಿಖೆ:
ಹುಣಸೋಡು ಮಹಾ ಸ್ಫೋಟ ದುರಂತದ ಉನ್ನತ ತನಿಖೆ ಮಾಡುವುದಾಗಿ ಗಣಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ. ಈ ಭಾಗದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ಸೂಕ್ತ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಐದು ಲಕ್ಷ ಪರಿಹಾರ:
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮೃತರ ಕುಟುಂಬಗಳಿಗೆ ಮುಖ್ಯ ಮಂತ್ರಿ ಅವರು ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಹುಣಸೋಡಿನ ಕ್ವಾರಿಯಲ್ಲಿ ನಡೆದಿರುವ ನಡೆದಿರುವ ಸ್ಫೋಟ ನಾವು ಜೀವನದಲ್ಲಿ ಕೇಳಿರಲಿಲ್ಲ. ಇದು ಬರೀ ಜಿಲೆಟಿನ್ ಕಡ್ಡಿಗಳ ಸ್ಫೋಟದಿಂದ ನಡೆದಿರುವುದು ಎನ್ನುವುದನ್ನು ನಂಬಲಾಗುತ್ತಿಲ್ಲ. ತಜ್ಞರ ತನಿಖೆಯಿಂದ ಸತ್ಯ ಹೊರಬರಲಿದೆ ಘಟನೆ ನಡೆದಿರುವ ಕ್ರಷರ್ ಸಕ್ರಮವಾಗಿದೆ ಆದರೆ ಯಾವ ಕಾರಣಕ್ಕೆ ಬ್ಲಾಸ್ಟ್ ಸಂಭವಿಸಿದೆ ಎಂಬುದರ ತನಿಖೆ ನಡೆಯಲಿದೆ. ಪುಣ್ಯವಶಾತ್ ಸುತ್ತಮುತ್ತಲ ಗ್ರಾಮಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ
.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಜಿಲ್ಲೆಯಲ್ಲಿ ಇಂತಹ ದುರ್ಘಟನೆ ನಡೆಯಬಾರದಿತ್ತು. ಸ್ಫೋಟದ ತೀವ್ರತೆಯಿಂದ ಅಕ್ಕ-ಪಕ್ಕದ ಗ್ರಾಮದವರು ಬೆದರಿದ್ದಾರೆ. ದೊಡ್ಡಮಟ್ಟದ ಶಬ್ದ ಜಿಲ್ಲೆಯದ್ಯಾಂತ ಕೇಳಿದೆ. ಗಣಿಗಾರಿಕೆ ಅಕ್ರಮ – ಸಕ್ರಮ ನಡೆದಿರುವ ಕುರಿತು ತನಿಖೆ ನಡೆಸಬೇಕಿದೆ. ಸ್ಫೋಟ ಬೆಳಗ್ಗೆ ವೇಳೆ ನಡೆದಿದ್ದರೆ,ಇನ್ನೂ ಹೆಚ್ಚಿನ ಸಾವು-ನೋವು ಸಂಭವಿಸುತ್ತಿತ್ತು. ಕ್ವಾರಿಗಳಲ್ಲಿ ಸುರಕ್ಷತಾ ಕ್ರಮ ಅನುಸರಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ
-ಬಿ.ವೈ.ರಾಘವೇಂದ್ರ, ಸಂಸದ
ಮೃತ್ಯು ಲಾರಿ ಎಲ್ಲಿಂದ ಬಂತು ?
ಜಿಲೆಟಿನ್ ಕಡ್ಡಿ ಹಾಗೂ ಡೈನಾಮೇಟ್‌ಗಳನ್ನು ತುಂಬಿಕೊಂಡಿದ್ದ ಲಾರಿಯು ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಬಂದಿತ್ತು. ಐವತ್ತು ಬಾಕ್ಸ್ ಸ್ಫೋಟಕ ಒಂದೇ ಕ್ವಾರಿಗಾಗಿ ಬಂದಿರಲಿಲ್ಲ. ಬದಲಾಗಿ ಕಲ್ಲುಗಣಿಗಾರಿಕೆ ನಡೆಸುವ ಹಲವು ಮಾಲೀಕರು ಸೇರಿ ತಮಿಳುನಾಡಿನಿಂದ್ ಸ್ಫೋಟಕ ತರಿಸಿದ್ದರು. ಶಿವಮೊಗ್ಗಕ್ಕೆ ಬಂದ ಮೇಲೆ ತಾವು ತರಿಸಿಕೊಂಡಿದ್ದ ಪ್ರಮಾಣದ ಜಿಲೆಟಿನ್ ಕಡ್ಡಿಗಳನ್ನು ಆಯಾ ಮಾಲೀಕರು ಕೊಂಡೊಯ್ಯಲಿದ್ದರು. ಎಸ್.ಎಸ್. ಕ್ರಷರ್‌ನಲ್ಲಿ ಅನ್‌ಲೋಡ್ ಆದ ಮೇಲೆ ಬಾಕ್ಸ್‌ಗಳನ್ನು ಎಲ್ಲರಿಗೆ ವಿತರಿಸುವ ಉದ್ದೇಶವಿತ್ತು ಎನ್ನಲಾಗಿದೆ.
ಗಣಿಗರಿಕೆ ಸ್ಥಗಿತ:
ಹುಣಸೋಡು ಕ್ವಾರಿ ದುರಂತ ಸಂಭವಿಸುತ್ತಿದ್ದಂತೆ ಸುತ್ತಮುತ್ತಲ ಗ್ರಾಮಗಳಲ್ಲಿರುವ ಅಕ್ರಮ ಹಾಗೂ ಸಕ್ರಮ ಕ್ವಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲ ಕ್ವಾರಿಯವರು ಕಾರ್ಮಿಕರನ್ನು ರಾತೋರಾತ್ರಿ ಸ್ಥಳಾಂತರಿಸಿದ್ದಾರೆ. ಘಟನೆ ಬಳಿಕ ಎಲ್ಲ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಎಚ್ಚೆತ್ತುಕೊಂಡಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.