ಶಿವಮೊಗ್ಗ ಹುಣಸೋಡು ಜಿಲೆಟಿನ್ ಸ್ಫೋಟದ ಬಳಿಕ ಮಲೆನಾಡಿನಾದ್ಯಂತ ನಡೆಯುತ್ತಿರುವ ಅಕ್ರಮ ಕಲ್ಲುಕ್ವಾರಿಗಳ ಒಂದೊಂದೇ ಹುಳುಕುಗಳು ಹೊರಬರಲಾರಂಭಿಸಿವೆ. ಮೊನ್ನೆ ಸ್ಫೋಟಗೊಂಡ ಲಾರಿಯಲ್ಲಿ ಅಪಾರ ಪ್ರಮಾಣದ ಜಿಲೆಟಿನ್ ಹಾಗೂ ಡಿಟೋನೇಟರ್‌ಗಳು ಇದ್ದವು ಎಂಬ ಬಗ್ಗೆ ಅನುಮಾನಗಳು ಎದ್ದಿವೆ. ಮಾಮೂಲಿ ಕ್ರಷರ್‌ಗೆ ಈ ಪ್ರಮಾಣದ ಸ್ಫೋಟಕಗಳ ಅಗತ್ಯವಿತ್ತೆ ಎಂಬ ದಿಸೆಯಲ್ಲಿ ತನಿಖಾಧಿಕಾರಿಗಳು ತಮ್ಮ ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬಾಂಬ್ ಪತ್ತೆ ನಿಷ್ಕ್ರಿಯದಳ ಶೋಧನೆ ಮಾಡಿದ್ದಾರೆ. ಯಾವ ಸಿಡಿಮದ್ದುಗಳನ್ನು ಬಳಸಲಾಗಿದೆ ಎಂಬ ಬಗ್ಗೆ ತನಿಖಾ ಸಂಸ್ಥೆ ವರದಿ ನೀಡಲಿದೆ. ಶನಿವಾರ ಹಟ್ಟಿ ಚಿನ್ನದ ಗಣಿಯಿಂದ ತಜ್ಞರು ಬಂದಿದ್ದು ತನಿಖೆ ಮುಂದುವರಿಸಿದ್ದಾರೆ, ಕಲ್ಲುಗಣಿಗಾರಿಕೆಯಲ್ಲಿ ಯಾವ ಸ್ಫೋಟಕ ಬಳಸುತ್ತಾರೆ. ಎಷ್ಟು ಪ್ರಮಾಣ ಅಗತ್ಯವಿದೆ. ದುರ್ಘಟನೆ ನಡೆದಿರುವ ಗಣಿಯಲ್ಲಿ ಯಾವ ಪ್ರಮಾಣದ ಸ್ಫೋಟಕ ಸಂಗ್ರಹಿಸಲಾಗಿತ್ತು. ಇದಕ್ಕೆ ಬೇಕಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆಯೇ ಮತ್ತು ಯಾವ ಲೋಪ ಆಗಿದೆ ಇತ್ಯಾದಿ ಸಂಗತಿಗಳ ಕುರಿತು ತಾಂತ್ರಿಕ ವರದಿಯನ್ನು ಹಟ್ಟಿ ಮೈನ್ಸ್‌ನ ತಜ್ಞರು ನೀಡಲಿದ್ದಾರೆ.
ಶುಕ್ರವಾರವೇ ಮೂವರು ತಜ್ಞರು ನಗರಕ್ಕೆ ಬಂದಿದ್ದು, ಸ್ಳಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಎಸ್.ಎಸ್.ಕ್ರಷರ್ ಮಾಲೀಕರಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ಮೂಲದ ಪ್ರಕಾರ ಇಡೀ ಜಿಲ್ಲೆಯ ನಾನಾ ಕಡೆಗಳಲ್ಲಿ ಜಿಲೆಟಿನ್ ಕಡ್ಡಿಗಳು ಇಲ್ಲಿಂದಲೇ ಪೂರೈಕೆ ಆಗುತ್ತಿದ್ದವು ಎಂದು ಹೇಳಲಾಗಿದೆ.
previous post
next post