ಹುಣಸೋಡು ಮಹಾಸ್ಫೋಟ ಜಿಲೆಟಿನ್ ಕಡ್ಡಿ ಮತ್ತು ಡಿಟೋನೇಟರ್ ತುಂಬಿದ್ದ ಲಾರಿ ಚಾಲಕನ ಎಡವಟ್ಟಿನಿಂದಾಗಿಯೇ ಸಂಭವಿಸಿದೆ ಎಂಬ ಅನುಮಾನವನ್ನು ತನಿಖಾಧಿಕಾರಿಗಳು ವ್ಯಕ್ತಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಎಸ್.ಎಸ್.ಕ್ರಷರ್ ಬಳಿ ಲಾರಿ ತಂದಿದ್ದ ಚಾಲಕ ಅದನ್ನು ರಿವರ್‍ಸ್ ತೆಗೆಯುವಾಗ ಸಮೀಪದಲ್ಲಿದ್ದ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಅನತಿ ದೂರದಲ್ಲಿದ್ದ ಟ್ರಾನ್ಸಫಾರ್ಮರ್ ಮೊದಲು ಸ್ಫೋಟಗೊಂಡಿದೆ. ಇದಾದ ಬಳಿಕ ಕರೆಂಟ್ ವೈರ್ ಸ್ಫೋಟಕ ತುಂಬಿದ್ದ ಲಾರಿಯ ಮೇಲೆ ತುಂಡಾಗಿ ಬಿದ್ದಿದ್ದರಿಂದ ಮಹಾಸ್ಫೋಟ ಸಂಭವಿಸಿದೆ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ ಎಂದು ಹೇಳಲಾಗಿದೆ.
ಲಾರಿ ಚಾಲಕನಿಗೆ ಹುಣಸೋಡು ವಿಳಾಸ ಸರಿಯಾಗಿ ಗೊತ್ತಿಲ್ಲದೆ ಶಿವಮೊಗ್ಗ ನಗರದೊಳಗೆ ಲಾರಿಯನ್ನು ತಂದಿದ್ದ. ಬಳಿಕ ಕ್ರಷರ್‌ನಿಂದ ಬಂದ ಬೊಲೆರೊ ವಾಹನ ಲಾರಿಯನ್ನು ಎಸ್ಕಾರ್ಟ್ ಮಾಡಿಕೊಂಡು ಹೋಗಿತ್ತು. ಇದರಿಂದ ಮೊದಲೇ ಗಾಬರಿಗೊಂಡಿದ್ದ ಲಾರಿ ಚಾಲಕ ಕ್ರಷರ್ ಬಳಿ ಲಾರಿಯನ್ನು ಹಿಂದೆ ಪಡೆಯುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದ. ಈ ಕಾರಣದಿಂದ ಟ್ರಾನ್ಸಫಾರ್ಮರ್ ಸ್ಫೋಟಗೊಂಡಿರಬಹುದು ಎನ್ನಲಾಗಿದೆ. ಈ ಅನುಮಾನವನ್ನು ಮಹಾಸ್ಫೋಟಕ್ಕೂ ಮುನ್ನ ಸಣ್ಣ ಶಬ್ಧ ಕೇಳಿಬಂದಿತು ಎಂಬ ಸ್ಥಳೀಯರ ಹೇಳಿಕೆ ಪುಷ್ಟೀಕರಿಸುತ್ತದೆ.
ಪುಲ್ವಾಮಾಕ್ಕಿಂತ ಭಯಂಕರ:
ಹುಣಸೋಡು ಸ್ಫೋಟ ಪುಲ್ವಾಮಾದಲ್ಲಿ ಭಯೋತ್ಪಾದಕರು ನಡೆಸಿದ್ದ ಬಾಂಬ್ ದಾಳಿಗಿಂತಲೂ ಹತ್ತು ಪಟ್ಟು ಹೆಚ್ಚಿತ್ತು ಎಂದು ಅಂದಾಜಿಸಲಾಗಿದೆ. ಪುಲ್ವಾಮಾದಲ್ಲಿ ಮುನ್ನೂರು ಕೆ.ಜಿ ಸ್ಫೋಟಕ ಬಳಸಲಾಗಿತ್ತು. ಆದರೆ ಇಲ್ಲಿನ ಲಾರಿಯಲ್ಲಿ ಟನ್‌ಗಟ್ಟಲೆ ಸ್ಫೋಟಕ ಇತ್ತೆಂದು ಹೇಳಲಾಗಿದೆ. ಡಿಟೋನೇಟರ್, ಜಿಲೆಟಿನ್ ಹಾಗೂ ಅಮೋನಿಯಂ ನೈಟ್ರೇಟ್ ರಾಸಯನಿಕ ಇದ್ದಕಾರಣ ಸ್ಫೋಟಕದ ತೀವ್ರತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಈ ರೀತಿಯ ಭಾರೀ ಪ್ರಮಾಣದ ಸಿಡಿಮದ್ದು ಏಕ ಕಾಲದಲ್ಲಿ ಸ್ಫೋಟಗೊಂಡಿದರಿಂದಾಗಿಯೇ ನೂರಾರು ಕಿಲೋಮೀಟರ್‌ಗಟ್ಟಲೆ ಶಬ್ಧ ಕೇಳಿದೆ ಮತ್ತು ಶಿವಮೊಗ್ಗ ನಗರ ಸುತ್ತಮುತ್ತಲ ಅಪಾರ ಪ್ರಮಾಣದ ಹಾನಿಯಾಗಿದೆ.
ತನಿಖೆ ಚುರುಕು:
ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯದಳ, ಹಟ್ಟಿ ಮೈನ್ಸ್‌ನ ತಜ್ಞರು ಭೇಟಿ ನೀಡಿದ್ದ ಈ ಆಯಾಮದಲ್ಲಿಯೇ ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳೀಯ ಪೊಲೀಸರು ಅವರಿಗೆ ಪೂರಕ ಮಾಹಿತಿ ನೀಡಿದ್ದಾರೆ, ಶಿವಮೊಗ್ಗ ಹೊರವಲಯದಲ್ಲಿ ನಡೆಯುತ್ತಿರುವ ಕ್ವಾರಿ ಚಟುವಟಿಕೆಗೆ ಇಷ್ಟುಪ್ರಮಾಣದ ಸ್ಫೋಟಕ ಅಗತ್ಯವಿತ್ತೆ ? ಅಥವಾ ಇಲ್ಲಿಂದ ಬೇರೆಡೆಗೂ ರವಾನೆಯಾಗುತ್ತಿತ್ತೆ. ಅಧಿಕೃತ ಕ್ವಾರಿಗಳಿಗೆ ಮಾತ್ರ ಸ್ಫೋಟಕವನ್ನು ಮಿತ ಪ್ರಮಾಣದಲ್ಲಿ ಬಳಸಲು ಅವಕಾಶ ಇದೆ. ಆದರೆ ಭಾರೀ ಪ್ರಮಾಣದ ಸ್ಫೋಟಕ ಹೇಗೆ ಬಂತು ಮತ್ತು ಎಷ್ಟು ದಿನಕ್ಕೊಮ್ಮೆ ಬರುತಿತ್ತು. ಪರವಾನಗಿ ದಾರರ ಬೇಡಿಕೆ ಎಷ್ಟಿತ್ತು ಇತ್ಯಾದಿ ಅಂಶಗಳನ್ನು ಸ್ಥಳೀಯ ಪೊಲೀಸರು ತನಿಖೆ ಮಾಡಬೇಕಷ್ಟೆ.