ಶಿವಮೊಗ್ಗ ಸಮೀಪದ ಹುಣಸೋಡು ಮಹಾಸ್ಫೋಟದಲ್ಲಿ ಮಡಿದವರಿಗೆ ನ್ಯಾಯಕೊಡಿಸಬೇಕು ಮತ್ತು ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಶನಿವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಅಬ್ಬಲಗೆರೆ ಸಮೀಪ ಪ್ರತಿಭಟನೆ ನಡೆಸಲಾಯಿತು.
ಸರಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಇಂತಹ ದುರ್ಘಟನೆ ನಡೆದಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ ಆಪ್ತರೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಶ್ರೀನಿವಸ್ ಕರಿಯಣ್ಣ, ಮಹಮದ್ ಅಡ್ಡು, ದೇವೇಂದ್ರಪ್ಪ, ಎಸ್.ಪಿ. ಶೇಷಾದ್ರಿ, ಯಮುನಾ ರಂಗೇಗೌಡ, ಎನ್.ಎಸ್.ಯು. ಮಧು, ಚೇತನ್ ಮತ್ತಿತರರು ಭಾಗವಹಿಸಿದ್ದರು.
ತಡೆದ ಪೋಲಿಸರು
ಹುಣಸೋಡು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ತೆರಳಲು ಅನುವಾದ ಡಾ. ಶ್ರೀನಿವಾಸ್ ಕರಿಯಣ್ಣ, ರವಿಕುಮಾರ್, ಸೇರಿದಂತೆ ಹಲವು ಮುಖಂಡರನ್ನು ತಡೆದ ಪೋಲಿಸರು, ಅವರನ್ನು ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಕುಂಸಿ ಬಳಿ ಬಿಡುಗಡೆ ಮಾಡಿದರು. ಪೊಲೀಸರ ಈ ಕೃತ್ಯವನ್ನು ಕಾಂಗ್ರೆಸ್ ನಾಯಕರು ಖಂಡಿಸಿದರು.