ಹುಣಸೋಡು ಸುತ್ತಮುತ್ತ ಪ್ರದೇಶ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಕಲ್ಲುಕ್ವಾರಿಗಳಿಗೆ ಅನುಮತಿ ನೀಡುವ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಹಾದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಬ್ಬಲಗೆರೆ ಹುಣಸೋಡು ಈ ಪ್ರದೇಶ ಸೂಕ್ಷ್ಮ ಪರಿಸರ ಪ್ರದೇಶವಾಗಿದೆ. ಇಲ್ಲಿ ಕ್ರಷರ್‌ಗಳಿಗೆ ಅನುಮತಿ ಇದೆ ಆದರೆ ಕಲ್ಲುಕ್ವಾರಿಗಳಿಗೆ ಅನುಮತಿ ನೀಡದಿರುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಕ್ವಾರಿ ದುರಂತದಲ್ಲಿ ೬ ಮಂದಿ ಸಾವಿಗೀಡಾಗಿದ್ದು, ಎಲ್ಲ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ಹೇಳಿದ್ದಾರೆ.
ಸಾವಿನ ಸಂಖ್ಯೆಯಲ್ಲಿ ಮಾಧ್ಯಮಗಳಲ್ಲಿ ದಿನಕ್ಕೊಂದು ಅಂಕಿ ಅಂಶಗಳು ಬರುತ್ತಿದ್ದು, ಮುಖ್ಯಮಂತ್ರಿ ಅವರೇ ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿರುವುದರಿಂದ ಈ ಸಂಬಂಧ ಇದ್ದ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಇಂತಹ ದುರ್ಘಟನೆ ನಡೆದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಹೈದರಾಬಾದ್ ನಿಂದ ತಜ್ಞರು ಬಂದಿದ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ವರದಿ ನೀಡಿದ ಬಳಿಕ ತಾಂತ್ರಿಕ ಮಾಹಿತಿ ಲಭ್ಯವಾಗಲಿದೆ. ಈ ಭಾಗದಲ್ಲಿರುವ ಕ್ರಷರ್ ಮತ್ತು ಕ್ವಾರಿಗಳ ಬಗ್ಗೆ ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸ್ಫೋಟಕ ಎಷ್ಟು ಬಂತು, ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಲು ಸೂಚಿಸಲಾಗಿದೆ.ಯಾರೇ ತಪ್ಪು ಮಾಡಿದರೂ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಂಸದ ಬಿ.ವೈ.ರಾಘವೆಂದ್ರ, ಮೇಯರ್ ಸುವರ್ಣಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಶಾಸಕ ಅಶೋಕ್ ನಾಯ್ಕ, ಜಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಶಾಂತರಾಜ್, ಎಸ್.ದತ್ತಾತ್ರಿ, ಚನ್ನಬಸಪ್ಪ ಮತ್ತಿತರರು ಇದ್ದರು.
previous post
next post