ಕೊರಿಯೋಗ್ರಾಫರ್ ಜೀವನ್ ಕೊಲೆ ಹಾಗೂ ಕೇಶವ್ ಶೆಟ್ಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ದೊಡ್ಡಪೇಟೆ ಪೊಲೀಸರು ಒಬ್ಬ ರೌಡಿ ಶೀಟರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಕೆ.ಎಂ.ಶಾಂತ್‌ಕುಮಾರ್, ರೌಡಿ ಶೀಟರ್ ಆದಿಲ್ ಪಾಷಾ, ಮಹಮದ್ ಸಮೀರ್, ಪ್ರತಾಪ್, ಸಕ್ಲೇನ್ ಮುಷ್ತಾಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ತಪ್ಪಿಸಿಕೊಂಡಿದ್ದು ಅವರನ್ನೂ ಶೀಘ್ರ ಬಂಧಿಸಲಾಗುವುದು. ಹೋಟೆಲ್‌ನಲ್ಲಿ ಪಾರ್ಟಿ ಮಾಡುವಾಗ ಗಲಾಟೆ ನಡೆದಿದೆ. ಹೋಟೆಲ್‌ನವರು ಲೈಟ್ ಆಫ್ ಮಾಡಿ ಎಲ್ಲರನ್ನೂ ಹೊರಗೆ ಕಳುಹಿಸಿದ್ದರು. ಬಂಧಿತ ಆರೋಪಿಗಳ ಬಳಿ ಮಾರಕಾಸ್ತ್ರಗಳನ್ನು ನೋಡಿದ್ದ ಉಳಿದ ಹುಡುಗರು ತಪ್ಪಿಸಿಕೊಂಡಿದ್ದಾರೆ. ಆದರೆ ಜೀವನ್ ಮತ್ತು ಕೇಶವ್ ಇವರ ಕೈಗೆ ಸಿಕ್ಕಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳ ಕಾರಣಕ್ಕೆ ಸಣ್ಣ ಪ್ರಕರಣ ಕೊಲೆಯವರೆಗೆ ಹೋಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಇದ್ದರು.
ಬಾಯ್ ತಪ್ಪಿನ ಮಾತಿಗೆ ಕೊಲೆ
ಬಾಯಿ ತಪ್ಪಿ ಆಡಿದ ಮಾತಿಗೇ ರೊಚ್ಚಿಗೆದ್ದ ಯುವಕನೊಬ್ಬ ತನ್ನ ಸಹಚರರನ್ನು ಕರೆದುಕೊಂಡು ಬಂದು ಜೀವನ್(26) ಎಂಬಾತನನ್ನು ಕೊಲೆಗೈದು ಮತ್ತೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ನಗರದಲ್ಲಿ ನಡೆದಿದೆ
ನಗರದ ಸುಂದರ ಆಶ್ರಯ ಹೋಟೆಲ್ ಸಮೀಪ ಈ ಘಟನೆ ನಡೆದಿದ್ದು, ಗಾಯಗೊಂಡ ಕೇಶವ್ ಶೆಟ್ಟಿ(27)ಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಜೀವನ್ ಮತ್ತು ಸ್ನೇಹಿತರು ಸುಂದರ್ ಆಶ್ರಯದಲ್ಲಿ ರಾತ್ರಿ ಪಾರ್ಟಿ ಮಾಡುತ್ತಿದ್ದರು. ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಅಪರಿಚಿತನನ್ನು ತನ್ನ ಸ್ನೇಹಿತನೇ ಎಂದು ಭಾವಿಸಿ ಲೇ ಮಗಾ ಎಂದು ಜೀವನ್ ಕರೆದಿದ್ದಾನೆ. ಇಷ್ಟಕ್ಕೇ ರೊಚ್ಚಿಗೆದ್ದ ಅಪರಿಚಿತ ಯುವಕ ಜೀವನ್ ಮೇಲೆ ಮುಗಿಬಿದ್ದಿದ್ದಾನೆ. ಈ ಸಂದರ್ಭ ಅಲ್ಲಿದ್ದ ಗ್ರಾಹಕರು ಜಗಳ ಬಿಡಿಸಿದ್ದಾರೆ. ಪಾರ್ಟಿ ಅದರಪಾಡಿಗೆ ಅದು ನಡೆಯುತಿತ್ತು. ಅಪರಿಚಿತ ವ್ಯಕ್ತಿಯೂ ಹೊರಹೋಗಿಯಾಗಿತ್ತು. ಪಾರ್ಟಿ ನಡುವೆಯೇ ಜೀವನ್ ಮತ್ತು ಕೇಶವ್ ಶೆಟ್ಟಿ ಸುಂದರ ಆಶ್ರಯ ಹೋಟೆಲ್ ಹೊರಭಾಗ ಮಾತನಾಡುತ್ತಾ ನಿಂತಿದ್ದರು. ಈ ಸಂದರ್ಭ ಏಕಾ ಏಕಿ ಬಂದ ಪುಂಡರ ಗ್ಯಾಂಗ್ ಇಬ್ಬರ ಮೇಲೂ ಚಾಕುವಿನಿಂದ ದಾಳಿ ನಡೆಸಿದೆ. ತೀವ್ರ ಇರಿತಕ್ಕೊಳಗಾದ ಜೀವನ್ ಸಾವುಕಂಡಿದ್ದಾನೆ. ಕೇಶವ್‌ಗೂ ಚಾಕುವಿನಿಂದ ಇರಿದಿದ್ದು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಮದ್ಯದ ಅಮಲಿನಲ್ಲಿ ನಡೆದ ಪುಂಡಾಟ ಒಂದು ಕೊಲೆಯಲ್ಲಿ ಅಂತ್ಯವಾಗಿದೆ. ಕೆ.ಆರ್.ಪುರಂ ರಸ್ತೆ ನಿವಾಸಿಯಾದ ಜೀವನ್ ಹತ್ಯೆ ಹಾಗೂ ಕೇಶವ್ ಮೇಲಿನ ಹಲ್ಲೆಗೆ ಸೀಗೆಹಟ್ಟಿ ಸುತ್ತಮುತ್ತ ಗುರುವಾರ ಬೆಳಗ್ಗೆಯಿಂದಲೇ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಶವದ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಗಲಾಟೆಯನ್ನೂ ಮಾಡಲಾಗಿತ್ತು. ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದ ದೊಡ್ಡಪೇಟೆ ಸಿಪಿಐ ವಸಂತ್, ಪಿಎಸ್‌ಐ ಶಂಕರಮೂರ್ತಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪೂರ್ವ ವಲಯ ಐ ಜಿ. ಎಸ್.ರವಿ ನಗರಕ್ಕೆ ಭೇಟಿ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ಅವರಿಗೆ ಸೂಚಿಸಿದ್ದಾರೆ.