ಶಿವಮೊಗ್ಗ ಹೊಸದಿಲ್ಲಿಯಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ಹೋರಾಟದಲ್ಲಿರುವವರು ಎಲ್ಲರೂ ರೈತರಲ್ಲ, ಇದರಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ಎಚ್.ಡಿ.ದೇವೇಗೌಡ ಅವರುಗಳು ಹಿಂದೆ ಪ್ರಸ್ತಾಪ ಮಾಡಿದ್ದ ಕೃಷಿಕಾಯಿದೆಗಳನ್ನೇ ಕೇಂದ್ರ ಸರಕಾರ ಜಾರಿಮಾಡಿದೆ. ಅನುಕೂಲವಾದ ಕಾಯಿದೆ ಎಂದು ದೇಶದ ರೈತರು ಒಪ್ಪಿದ್ದರೂ, ಕಾಯಿದೆಗಳನ್ನು ವಿರೋಧಿಸುತ್ತಿರುವವರು ವಿದೇಶಿ ಶಕ್ತಿಗಳ ಕೈವಶವಾದವರು. ಬಾಹ್ಯ ಶಕ್ತಿಗಳು ಹೋರಾಟವನ್ನು ಹೈಜಾಕ್ ಮಾಡಿರುವ ಸಂದರ್ಭದಲ್ಲಿ ರಾಷ್ಟ್ರ ಭಕ್ತರು ಎಚ್ಚರದಿಂದಿರಬೇಕು ಎಂದು ಈಶ್ವರಪ್ಪ ಹೇಳಿದರು.
ಪ್ರತಿಪಕ್ಷಗಳು ಅರಿಯಬೇಕು:
ಕೃಷಿಕಾಯಿದೆಗಳ ಬಗ್ಗೆ ವಿರೋಧ ಪಕ್ಷಗಳು ಚರ್ಚಿಸಬೇಕು. ಅವು ಪ್ರತಿಕ್ರಿಯಿಸಬೇಕು. ಹಿಂದಿನ ಸರಕಾರಗಳಲ್ಲಿ ಪ್ರಸ್ತಾಪಿತ ಕಾಯಿದೆಯೇ ಜಾರಿಯಾಗಿರುವಾಗ ಪ್ರತಿಪಕ್ಷಗಳು ತಮ್ಮ ಜವಾಬ್ದಾರಿ ಮರೆಯಬಾರದು. ರೈತರು ತಾವು ಬೆಳೆದಿರುವ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ನೂತನ ಎಪಿಎಂಸಿ ತಿದ್ದುಪಡಿ ಕಾಯಿದೆ ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ರೈತರ ವಿರೋಧ ಇಲ್ಲ ಅನ್ಯ ಶಕ್ತಿಗಳು, ದೇಶ ವಿರೋಧಿ ಶಕ್ತಿಗಳು ಮಾಡುತ್ತಿರುವ ಹುನ್ನಾರಕ್ಕೆ ಯಾರು ಬಲಿಯಾಗಬಾರದು ಎಂದು ಅವರು ಹೇಳಿದರು.
ದೇಶದಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಅವಕಾಶವಿದೆ, ಕೇಂದ್ರ ಸರಕಾರ ಮಾತುಕತೆಗೆ ಸಿದ್ದವಿದ್ದರೂ ಪ್ರತಿಭಟನಾಕಾರರು ಮೊದಲೇ ಷರತ್ತು ಹಾಕುವುದು ಸರಿಯಲ್ಲ. ಒಪ್ಪುವುದಾದರೆ ಬನ್ನಿ ಎಂದು ಹಠ ಸಾಧಿಸುವುದು ನ್ಯಾಯ ಸಮ್ಮತವಾದ ನಡೆಯಲ್ಲ ಎಂದು ಸಚಿವರು ಅಭಿಪ್ರಾಯ ಪಟ್ಟರು.
previous post