ರೈತರು ಬೀದಿ ಮೇಲೆ ಕುಳಿತು ತಿನ್ನೋದು, ಮಲಗೋದು ನೋಡಿದ್ರೆ ಕಳ್ ಚುರ್ ಎನ್ನುತ್ತದೆ ಎನ್ನುವ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟಕ್ಕೆ ಹ್ಯಾಟ್ರಿಕ್ ಹೀರೊ ಡಾ.ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಎರಡು ತಿಂಗಳಿಂದ ರೈತರು ಮಾಡುತ್ತಿರುವ ಹೋರಾಟ ನೋಡಿ ತುಂಬಾ ದುಃಖವಾಗುತ್ತಿದೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ಅವರ ಬೇಡಿಕೆಯನ್ನು ಪೂರ್ಣ ಈಡೇರಿಸುತ್ತಿದ್ದೆ ಎಂದಿರುವ ಶಿವಣ್ಣ, ಸಿನೆಮಾ ಮಂದಿ ಬೀದಿಗಿಳಿಯಲ್ಲ ಅಂತಾರೆ ಆದರೆ ನಾವು ಹಾಗೆ ಮಾಡಿದರೆ ಸಮಸ್ಯೆ ಬಗೆಹರಿಯಲ್ಲ. ಸರಕಾರದೋರ ಕೈಯಲ್ಲಿ ಎಲ್ಲವೂ ಇದೆ. ಅವರು ಮನಸು ರೈತರ ಸಮಸ್ಯೆ ಬಗೆಹರಿಸಬೇಕು. ನಮ್ಮ ಚಿತ್ರರಂಗದ ಸಮಸ್ಯೆಗಳೂ ಬಹಳಷ್ಟಿವೆ. ಇಲ್ಲಿಯೂ ಸರಕಾರ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ದೇಶದ ಜನರಿಗೆ ಅನ್ನ ನೀಡುವ ರೈತರು ಮಹಾತ್ಮರು ಅವರೇ ಬೀದಿಯಲ್ಲಿ ಕುಳಿತು ತಿನ್ನುವ ಪರಿಸ್ಥಿತಿ ಯಾರಿಗೂ ಒಳ್ಳೆಯದಲ್ಲ ಎಂದಿರುವ ಶೀವರಾಜ್ ಕುಮಾರ್, ಚಿತ್ರರಂಗದವರು ಕಾಮೆಂಟ್ ಮಾಡಲ್ಲ, ಬೀದಿಗಿಳಿಯಲ್ಲ ಅಂತಾರೆ, ನಮ್ಮಿಂದ ಸಮಸ್ಯೆ ಇತ್ಯರ್ಥ ಆಗುವುದಾದರೆ ನಾನು ಎಲ್ಲದಕ್ಕೂ ಸಿದ್ಧ. ನಮ್ಮ ಬೆಂಬಲ ಯಾವತ್ತೂ ಈ ನಾಡಿನ ರೈತರಿಗಿರುತ್ತದೆ ಎಂದು ಶಿವಣ್ಣ ರೈತರಪರ ದನಿ ಎತ್ತಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗಷ್ಟೆ ಕಲಾವಿದರು, ಸೆಲೆಬ್ರಿಟಿಗಳು ರೈತರ ಹೋರಾಟವನ್ನು ಗಮನಿಸಬೇಕು. ಕಮೆಂಟ್ ಮಾಡಬೇಕು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. “ಮಣ್ಣ ನಂಬಿ ಕೆಟ್ಟವರಿಲ್ಲವೊ ಮನುಜ’ ಎಂಬ ಸಂದೇಶ ಸಾರಿರುವ ವರನಟ ಡಾ.ರಾಜ್‌ಕುಮಾರ್, ನಟನೆಯ ಬಂಗಾರದ ಮನುಷ್ಯ ಚಿತ್ರ ಒಕ್ಕುಲುತನದ ಮಹತ್ವವನ್ನು ಸಾರಿ ಬದಲಾವಣೆಯ ಪರ್ವಕ್ಕೆ ಕಾರಣವಾಗಿತ್ತು. ಈಗ ಟಗರು ಶಿವಣ್ಣ ಕೃಷಿಕರತ್ತ ತಮಗಿರುವ ಒಲವನ್ನು ಸಾರಿದ್ದಾರೆ.
previous post
next post