ಶಿವಮೊಗ್ಗ ಜಿಲ್ಲಾ ಆರ್ಯಈಡಿಗ ಸಮುದಾಯದ ಬಹುದಿನಗಳ ಕನಸು ನನಸಾಗುವ ಸಮಯ ಕೊನೆಗೂ ಬಂದೇಬಿಟ್ಟಿತು. ಹೌದು ಶಿವಮೊಗ್ಗ ಜಿಲ್ಲೆಯ ಬಹುಸಂಖ್ಯಾತ ಸಮುದಾಯಕ್ಕೆ ಜಿಲ್ಲಾ ಕೇಂದ್ರದಲ್ಲಿ ಒಂದು ಸಮುದಾಯ ಭವನ ಇರಲಿಲ್ಲ. ಕಳೆದ ಹತ್ತು ವರ್ಷದಿಂದ ನಿರ್ಮಾಣಗೊಳ್ಳುತ್ತಿದ್ದ ಈಡಿಗ ಭವನದ ಲೋಕಾರ್ಪಣೆಗೆ ಈಗ ಮುಹೂರ್ತ ಕೂಡಿ ಬಂದಿದೆ.
ಫೆ.೧೭ ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್ ಈ ಮಾಹಿತಿ ನೀಡಿದರು. ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವನದ ಬಹುತೇಕ ಪೂರ್ಣಗೊಂಡಿದೆ. ಹವಾನಿಯಂತ್ರಿತ ವ್ಯವಸ್ಥೆ ಮಾತ್ರ ಬಾಕಿ ಇದ್ದು. ಕಾಮಗಾರಿ ಭರದಿಂದ ಸಾಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭ ಸಮುದಾಯಕ್ಕೆ ಶಿವಮೊಗ್ಗದ ಹೃದಯ ಭಾಗದಲ್ಲಿ ಒಂದು ಎಕರೆ ಜಾಗ ಮಂಜೂರು ಮಾಡಿ ಸರಕಾರದಿಂದ ಒಂದು ಕೋಟಿ ರೂ.ಅನುದಾನವನ್ನೂ ನೀಡಿದ್ದರು. ಸಮುದಾಯದ ಜನಪ್ರತಿನಿಧಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವಿನಿಂದ ಇಂದು ಸುಸಜ್ಜಿತ ಸಮುದಾಯ ಭವನ ನಿರ್ಮಾಣವಾಗಿದೆ ಎಂದು ಶ್ರೀಧರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ,ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಶಿಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಧರ್ಮದರ್ಶಿ ಡಾ.ರಾಮಪ್ಪ, ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಮಾಲೀಕರಾದ ಕೆ.ಎನ್.ತಿಲಕ್ ಕುಮಾರ್ ವಿವಿಧ ವಿಭಾಗಗಳನ್ನು ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕರು ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹೆಚ್.ಹಾಲಪ್ಪ್, ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಮಧುಬಂಗಾರಪ್ಪ, ಕೆ.ಬಿ.ಪ್ರಸನ್ನಕುಮಾರ್ ಭಾಗವಹಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕರೂ ಹಾಗೂ ಈಡಿಗ ಸಂಘದ ಗೌರವ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ವಹಿಸುವರು ಎಂದರು.
ವಿಶೇಷ ಆಹ್ವಾನಿತರಾಗಿ ಆದಾಯ ತೆರಿಗೆ ನ್ಯಾಯಾಧೀಕರಣದ ಸದಸ್ಯ ಜಿ.ಮಂಜುನಾಥ್, ರಾಜ್ಯ ಸಂಘದ ಅಧ್ಯಕ್ಷ ತಿಮ್ಮೇಗೌಡ, ಜೆಪಿಎನ್ ಪ್ರತಿಷ್ಠಾನದ ಜೆ.ಸಿ.ಸುಧಾಕರ್, ಕೆಪಿಎಸ್ಸಿ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ.ನಾರಾಯಣಪ್ಪ ಭಾಗವಹಿಸುವರು. ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಲಾಗುವುದು ಎಂದು ಹುಲ್ತಿಕೊಪ್ಪ ಶ್ರೀಧರ್ ಹೇಳಿದರು.
ಎನ್.ಪಿ.ಧರ್ಮರಾಜ್, ಎಸ್ಸಿ ರಾಮಚಂದ್ರ, ಮಹೇಶ್, ಜಿ.ಡಿ.ಮಂಜುನಾಥ್, ಡಿ.ದೇವಪ್ಪ, ರಾಜಪ್ಪ ತೇಕಲೆ, ಕೆ.ವೈ.ರಾಮಚಂದ್ರ, ರಮೇಶ್, ಪ್ರೊ.ಕಲ್ಲನ ಮತ್ತಿತರರಿದ್ದರು.