Malenadu Mitra
ರಾಜ್ಯ

ಈಡಿಗ ಸಮಾಜದ ಕೊಡುಗೆ ಅನನ್ಯ: ಯಡಿಯೂರಪ್ಪ

ಆರ್ಯ ಈಡಿಗ ಭವನ ಲೋಕಾರ್ಪಣೆ
ಶಿವಮೊಗ್ಗ ಜಿಲ್ಲೆಯ ಬಹುಸಂಖ್ಯಾತ ಈಡಿಗರ ಸಮುದಾಯ ಭವನಕ್ಕೆ ಅಡಿಗಲ್ಲು ಹಾಕಿ ಉದ್ಘಾಟನೆಯನ್ನು ನಾನೇ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
 ಜಿಲ್ಲಾ ಆರ್ಯ ಈಡಿಗರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮುದಾಯ ಭವನ ನೀರಿಕ್ಷೆಗೂ ಮೀರಿ ಚೆನ್ನಾಗಿ ಬಂದಿದೆ. ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಈಡಿಗ ಸಮುದಾಯದ ಪಾತ್ರ ಅತಿ ಮುಖ್ಯವಾಗಿದೆ. ಸಮುದಾಯದ ಅನೇಕ ನಾಯಕರು ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
ಈಡಿಗ ಭವನಕ್ಕೆ ಸ್ಥಳ ಮತ್ತು ಅನದಾನವನ್ನೂ ನೀಡಲಾಗಿತ್ತು. ಈಡಿಗ ಸಮುದಾಯದ ಬ್ರಹ್ಮಶ್ರೀ ನಾರಾಯಣಗುರು ಮಹಾಸಂಸ್ಥಾನಕ್ಕೆ ೩ ಕೋಟಿ ರೂ.ಅನುದಾನವನ್ನು ಸರಕಾರದಿಂದ ನೀಡಲಾಗಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ಸಮಾಜ ಮುಂದುವರಿಯಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಸಾಗರ  ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ದೊಡ್ಡ ಸಮಾಜವಾದರೂ ನಮ್ಮಲ್ಲಿನ ಗೊಂದಲಗಳಿಂದಾಗಿ ಸಮುದಾಯಭವನ ಪೂರ್ಣಗೊಳಿಸಲು  ೧೨ ವರ್ಷ ಬೇಕಾಯಿತು. ಇದರ ಸದ್ಬಳಕೆ ಆಗಬೇಕು. ಸರಕಾರದ ಅನುದಾನದಿಂದ ನಿರ್ಮಾಣವಾಗಿರುವ ಹಾಸ್ಟೆಲ್ ಕೂಡಾ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆಯಾಗಬೇಕು. ಅದನ್ನು ಬಾಡಿಗೆ ಕೊಟ್ಟಿರುವುದು ಸರಿಯಲ್ಲ ಎಂದರು.
ಯಡಿಯೂರಪ್ಪನವರು ಸಿಎಂ ಆದಾಗ ನಮ್ಮ ಸಮಾಜಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಕಟ್ಟುವ ಮನಸ್ಸುಗಳಿದ್ದರೆ, ನಾವು ಕೊಡಲು ಬದ್ಧರಾಗಿರುತ್ತೇವೆ. ಅಂದು ಸಮುದಾಯ ಭವನದ ಗುದ್ದಲಿ ಪೂಜೆಗೆ ಬಹಿಷ್ಕಾರ ಹಾಕಿದ ಬೇಳೂರು ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿಯೇ ಉದ್ಟಾಟನೆ ಮಾಡಿದ್ದು ಸಂತೋಷ ತಂದಿದೆ ಎಂದರು.
ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ ಮಾತನಾಡಿ, ದೇವರ ಇಚ್ಚೆಯಂತೆ ಸುಸಜ್ಜಿತ ಭವನ ನಿರ್ಮಾಣವಾಗಿದೆ. ಹಿಂದೆ ನಮ್ಮವರೇ ಅಧಿಕಾರದಲ್ಲಿದ್ದಾಗ ನಮಗೆ ಶಿವಮೊಗ್ಗದಲ್ಲಿ ನಿವೇಶನ ಪಡೆಯಲು ಆಗಲಿಲ್ಲ. ಯಡಿಯೂರಪ್ಪ ಅವರ ಕಾಲದಲ್ಲಿ ನಿವೇಶನ ಕಟ್ಟಡ ಎಲ್ಲವೂ ಆಗಿದೆ. ಸಮಾಜವೂ ಉಳಿದ ಸಮಾಜಗಳಂತೆ ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬರಬೇಕೆಂದರು.
ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಶೋಷಿತ ಸಮುದಾಯವಾದ ಈಡಿಗರು ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದಾರೆ. ಸಂವಿಧಾನದತ್ತವಾಗಿ ತಳ ಸಮುದಾಯಕ್ಕಿರುವ ಹಕ್ಕುಗಳನ್ನು ಪಡೆಯಲು ನಮ್ಮಲ್ಲಿ ಶಿಕ್ಷಣ ಮತ್ತು ಸಂಘಟನೆಯ ಅಗತ್ಯವಿದೆ ಎಂದರು.
ಮಾಜಿ ಸಚಿವ ಕಾಗೋಡುತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ.ಜಿ.ಡಿ.ನಾರಾಯಣಪ್ಪ, ಕೆ.ಬಿ.ಪ್ರಸನ್ನಕುಮಾರ್, ಕೆ.ಪಿ.ಎಸ್ಸಿ ಮಾಜಿ ಸದಸ್ಯ ಲಕ್ಷ್ಮೀನರಸಯ್ಯ ಮತ್ತಿತರರಿದ್ದರು. ಈಡಿಗರ ಸಂಘದ ಗೌರವಾಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಆರ್.ಶ್ರೀಧರ್ ಸ್ವಾಗತಿಸಿದರು. ಜಿ.ಡಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಸ್ವಾಮೀಜಿ ನೆನಪಿಸಿದ ಸಿಎಂ

ರೇಣುಕಾನಂದ ಸ್ವಾಮೀಜಿ

ಈಡಿಗ ಭವನ ಉದ್ಘಾಟನೆ ಸಮಾರಂಭಕ್ಕೆ ಸಮಾಜದ ಸ್ವಾಮೀಜಿ ರೇಣುಕಾನಂದ ಸ್ವಾಮೀಜಿ ಅವರಿಗೆ ಆಹ್ವಾನ ಇರಲಿಲ್ಲ. ಭವನ ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಮಾಜದ ಮಠ ಇದೆ. ಅಲ್ಲಿಗೆ ಸರಕಾರ ಅನುದಾನವನ್ನು ನೀಡಿದೆ. ಗುರುಗಳ ಮಾರ್ಗದರ್ಶನದಲ್ಲಿ ಸಮಾಜ ನಡೆಯಲಿ ಎಂದು ಸಲಹೆ ಕೊಟ್ಟರು. ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಲಪ್ಪ ಮಾತನಾಡುವಾಗ ಆಹ್ವಾನ ಪತ್ರಿಕೆಯಲ್ಲಿ ಸ್ವಾಮೀಜಿ ಕರೆದು ಗೌರವ ಕೊಡದಿರುವುದು ಸರಿಯಲ್ಲ. ಸಮಾಜದ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಅಧ್ಯಕ್ಷರನ್ನು ನಿರ್ಲಕ್ಷ್ಯ ಮಾಡಿರುವುದೂ ಸರಿಯಲ್ಲ ಎಂದು ಸಂಘಟಕರಿಗೆ ಹೇಳಿದರು.

Ad Widget

Related posts

ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆ ಲಭ್ಯ: ಡಾ.ಮಂಜುನಾಥ್

Malenadu Mirror Desk

ಶಿಕ್ಷಣದಿಂದ ಮಾತ್ರ ಸಮಾಜದ ಏಳಿಗೆ: ಶ್ರೀ ವಿಖ್ಯಾತನಂದ ಸ್ವಾಮೀಜಿ

Malenadu Mirror Desk

ಸೊರಬ ಬಿಜೆಪಿ ಒಳಸುಳಿಯಲ್ಲಿ ಮತ್ತೆ ಅಭ್ಯರ್ಥಿಯಾಗುವರೇ ಕುಮಾರ್‌ಬಂಗಾರಪ್ಪ ?,
ಹೊಸಬರ ಹುಡುಕಾಟದಲ್ಲಿದೆಯೇ ಕಮಲ ಪಕ್ಷ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.