ಸರ್ಕಾರದ ನೂತನ ಕೈಗಾರಿಕಾ ನೀತಿಯ ಪ್ರಕಾರ ಹೆಚ್ಚಿನ ಉದ್ಯೋಗಗಳನ್ನು ಸೃಜಿಸುವ ಕೈಗಾರಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರು ಬುಧವಾರ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಲಾಗಿದ್ದ ಮಾಚೇನಹಳ್ಳಿ ಕೈಗಾರಿಕಾ ಸಂಘದ ರಜತ ಮಹೋತ್ಸವ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸರ್ಕಾರ ಕೈಗಾರಿಕೆಗಳನ್ನು ಪ್ರಾರಂಭಿಸಲು ಪೂರಕ ವಾತಾವರಣ ನಿರ್ಮಿಸುತ್ತಿದೆ. ರಸ್ತೆ, ನೀರು ಪೂರೈಕೆ, ವಿದ್ಯುತ್ ಮುಂತಾದ ಮೂಲಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ಉತ್ತೇಜನ ನೀಡುತ್ತಿದೆ. ಪ್ರಸ್ತುತ ಕೈಗಾರಿಕಾ ಹೂಡಿಕೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. 2020ರ ನೂತನ ಕೈಗಾರಿಕಾ ನೀತಿಯ ಪ್ರಕಾರ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಿದೆ ಎಂದರು.
ರಾಜ್ಯದ ಐಟಿಐಗಳನ್ನು ಟಾಟಾ ಟೆಕ್ನಾಲಜಿ ಸಂಸ್ಥೆಯ ಸಹಯೋಗದಲ್ಲಿ 4636ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ, ತೀರ್ಥಹಳ್ಳಿ ಮತ್ತು ಕಾರ್ಗಲ್ ಐಟಿಐಗಳನ್ನು ಸಹ ಮೇಲ್ದರ್ಜೆಗೆ ಏರಿಸುವ ಮೂಲಕ ಯುವಜನತೆಗೆ ಹೆಚ್ಚಿನ ಕೌಶಲ್ಯ ಒದಗಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಕೈಗಾರಿಕಾ ವಲಯದ ಕಾರ್ಮಿಕರಿಗೆ ಮನೆಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದ್ದು, ವಿವಿಧ ಯೋಜನೆಗಳನ್ನು ಬಳಸಿಕೊಂಡು ಕಾರ್ಮಿಕರ ವಸತಿ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದರು.
ಶಿವಮೊಗ್ಗದಲ್ಲಿ ಒಂದು ವರ್ಷದ ಒಳಗಾಗಿ ಸರ್ವಸಜ್ಜಿತ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳ ಹೆಚ್ಚಿನ ಬೆಳವಣಿಗೆ ನಿರೀಕ್ಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ಬಜೆಟ್‍ನಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆ ರಾಜ್ಯದ ಕೈಗಾರಿಕಾ ಬೆಳವಣಿಗೆಯಲ್ಲಿ ಹೆಚ್ಚಿನ ಕೊಡುಗೆ ನೀಡಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ 3ಸಾವಿರ ಮಂದಿಗೆ ನೇರವಾಗಿ ಮತ್ತು 2ಸಾವಿರ ಮಂದಿಗೆ ಪರೋಕ್ಷವಾಗಿ ಉದ್ಯೋಗ ಕಲ್ಪಿಸಿದೆ. ಇಲ್ಲಿ ಪ್ರತಿ ವರ್ಷ 600ಕೋಟಿ ರೂ. ವಹಿವಾಟು ನಡೆಸುತ್ತಿದೆ. ಸಂಘವು ಕೌಶಲ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ಕೇಂದ್ರ ತೆರೆಯಲು ಹಾಗೂ ಮರಳು ಸುಧಾರಣಾ ಘಟಕ ಮತ್ತು ಉಪಯುಕ್ತತೆ ಕೇಂದ್ರವನ್ನು 20ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು.
ಆತ್ಮನಿರ್ಭರ್ ಯೋಜನೆಯಡಿ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ಕಾರ್ಯಕ್ರಮ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ನೀಡುವ ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಕಿರು ಸಾಲ ಸೌಲಭ್ಯ ಪಡೆದಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಬಿ.ಕೆ.ಸಂಗಮೇಶ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತಿ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.