ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗ ಸಂಘದ ಬಹುನಿರೀಕ್ಷೆಯ ಈಡಿಗ ಭವನ ಅದ್ದೂರಿ ಉದ್ಘಾಟನೆ ಬುಧವಾರ ನಡೆಯಿತು. ಸಮಾರಂಭದಲ್ಲಿ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಹರತಾಳು ಹಾಲಪ್ಪ ಅವರು ತಮ್ಮದೇ ಸಮಾಜದ ಕೆಲ ಮುಖಂಡರ ಕಾಲೆಳೆದರು. ಅವರು ಹೋದ ಬಳಿಕ ಮಾಜಿ ಶಾಸಕ ಹಾಗೂ ಸಂಘದ ಗೌರವ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಅವರೂ ಹಾಲಪ್ಪ ಅವರ ಟಾಂಗ್‌ಗೆ ಸಮಜಾಯಿಷಿ ನೀಡಿದ್ದರು. ಆದರೆ ಇದು ಅಲ್ಲಿಗೆ ಮುಗಿದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಉಭಯ ನಾಯಕರ ಅಭಿಮಾನಿಗಳು ಪರಸ್ಪರ ಕಾಲೆಳೆದುಕೊಳ್ಳುವುದನ್ನು ಮುಂದುವರಿಸಿದ್ದಾರೆ.ಇದಕ್ಕೆ ನಾಯಕರೂ ಬೆಂಗಾವಲಾಗಿ ನಿಂತಿದ್ದಾರೆ.
ಹನ್ನೆರಡು ವರ್ಷದ ಹಿಂದೆ ಸಮುದಾಯ ಭವನ ಉದ್ಘಾಟನೆ ಸಮಾರಂಭವನ್ನು ಬಹಿಷ್ಕರಿಸಿದ್ದ ಗೋಪಾಲಕೃಷ್ಣ ಇಂದು ಅಧ್ಯಕ್ಷತೆ ವಹಿಸಿದ್ದಾರೆ ಸಂತೋಷ ಎಂದು ಹಾಲಪ್ಪ ಕಾಲೆಳೆದಿದ್ದರು. ಕೊನೆಗೆ ಅಧ್ಯಕ್ಷೀಯ ಭಾಷಣ ಮಾಡಿದ್ದ ಬೇಳೂರು. ಶಂಕುಸ್ಥಾಪನೆ ಸಂದರ್ಭ ಕೆಲವೇ ವ್ಯಕ್ತಿಗಳಿಗೆ ಆಹ್ವಾನ ನೀಡಿದ್ದರಿಂದ ಅಂದಿನ ಸಮಾರಂಭ ಬಹಿಷ್ಕರಿಸಿದ್ದೆ ಎಂದು ಸಮಜಾಯಿಷಿ ನೀಡಿದ್ದರು. ಈ ವಿಚಾರ ಮಾಧ್ಯಮಗಳಲ್ಲಿಯೂ ಪ್ರಕಟವಾಗಿತ್ತು.
ಪರಸ್ಪರರ ಬೆಂಬಲಿಗರೂ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆ ಮುಂದುವರಿಸಿದ್ದಾರೆ. ಹನ್ನೆರಡು ವರ್ಷದ ಹಿಂದಿನ ಘಟನೆ ಕೆದಕುತ್ತಿರುವ ಅಭಿಮಾನಿಗಳು, ಅಂದು ಬೇಳೂರು ಅವರು, ಸಮಾಜದ ನಾಯಕ ಕಾಗೋಡು ತಿಮ್ಮಪ್ಪ ಹೆಸರನ್ನು ಆಹ್ವಾನಿಸಬಾರದು ಮತ್ತು ಈಡಿಗರ ಸಂಘದ ರಾಜ್ಯಾದ್ಯಕ್ಷ ಜೆ.ಪಿ.ನಾರಾಯಣಸ್ವಾಮಿ ಅವರನ್ನು ಕರೆಸಿದ್ದನ್ನು ಖಂಡಿಸಿ ಸಮಾರಂಭ ಬಹಿಷ್ಕರಿಸಿದ್ದರು ಎಂದು ನೆನಪು ಮಾಡಿಕೊಟ್ಟಿದ್ದಲ್ಲದೆ, ಭವನದ ಶಂಕುಸ್ಥಾಪನೆ ನಾಮಫಲಕದ ಫೋಟೊವನ್ನೂ ಹಂಚಿಕೊಂಡಿದ್ದಾರೆ. ಒಂದು ಕಾಲದಲ್ಲಿ ಒಟ್ಟಾಗಿಯೇ ಇದ್ದ ನಾಯಕರ ಈ ರೀತಿಯ ವರ್ತನೆ ಸರಿಯಲ್ಲ ಎಂಬುದು ಜಾಲತಾಣದಲ್ಲಿನ ತಟಸ್ಥ ಬಣದ ಅಭಿಪ್ರಾಯವಾಗಿದೆ.
ಅಂದಿನ ಈಡಿಗ ಭವನದ ಶಂಕುಸ್ಥಾಪನೆಗೆ ಕೆಲವೇ ಮಂದಿಗೆ ಆಹ್ವಾನ ನೀಡಿದ್ದೀರಿ, ಅಂದಿದ್ದೀರಿ ಇನ್ನಾರನ್ನ ಸೇರಿಸಬೇಕಿತ್ತು? .ಶಂಕುಸ್ಥಾಪನೆ ಕಲ್ಲಲ್ಲಿ ಕಾಗೋಡು ತಿಮ್ಮಪ್ಪನವರ ಹೆಸರು ಹಾಕದಿರಲು ಕಾರಣ ನೀವಲ್ಲವೆ?.ಜೆ.ಪಿ.ನಾರಾಯಣ ಸ್ವಾಮಿ ಕರೆಸಬಾರದೆಂದು ಪಟ್ಟು ಹಿಡಿದವರು ನೀವಲ್ಲವೆ?,ಶಂಕುಸ್ಥಾಪನೆಗೆ ಸಿಎಂ ಬರುವವರೆಗೆ ಹತ್ತಿರದಲ್ಲಿದ್ದು, ನಂತರ ಪಲಾಯನ ಮಾಡಿದ್ದು ನೀವಲ್ಲವೆ?, ಬುಧವಾರದ ಸಮಾರಂಭದಲ್ಲಿ ನೀವು ಹೇಳಿದಂತೆ ಸಂಘಕ್ಕೆ ನೀವು ಕೊಟ್ಟ ೫ ಲಕ್ಷ ಚೆಕ್ ಜಮಾ ಆಗಿದೆಯೇ ?
– ಹರತಾಳು ಹಾಲಪ್ಪ , ಎಂಎಸ್‌ಐಎಲ್ ಅದ್ಯಕ್ಷರು ಮತ್ತು ಶಾಸಕರು
ಶಂಕುಸ್ಥಾಪನೆ ಸಂದರ್ಭದಲ್ಲಿ ಸಂಘದಲ್ಲಿದ್ದವರು ನೀವು. ಈಗ ಕಲ್ಲಿನಲ್ಲಿ ಕಾಗೋಡು ಅವರ ಹೆಸರಿಲ್ಲ. ಜೆ.ಪಿ.ಕರೆಸದಿರಲು ಕಾರಣ ಏನು ಎಂದು ನನ್ನನ್ನು ಪ್ರಶ್ನಿಸುವುದು ಅಪಹಾಸ್ಯ. ಅಂದು ಪ್ರೋಟೋಕಾಲ್ ಪ್ರಕಾರ ಯಾರ ಹೆಸರು ಸೇರಿಸಬೇಕಿತ್ತು ಎಂದು ನಿರ್ಧರಿಸಿದವರು ನೀವು. ಭವನಕ್ಕೆ ೫ ಲಕ್ಷವಲ್ಲ ಒಂಬತ್ತು ಲಕ್ಷ ರೂ. ನೀಡಿದ್ದೇನೆ. ೯ ಲಕ್ಷ ಕೊಡುವೆ ಎಂದು ಹೇಳಿದ ನೀವು ಕೊಟ್ಟಿದ್ದೀರಾ?, ನಾನು ಸಂಘದಲ್ಲಿರುವಾಗ ಉದ್ಘಾಟನೆ ಆಯಿತು ಎಂಬ ಸಂಕಟವೆ ?, ಅಂದು ಸಿಎಂ ಕಾರ್ಯಕ್ರಮಕ್ಕೆ ಕೇವಲ ೬೦ ಜನ ಸೇರಿಸಿದ್ದರಿಂದ ನಾನು ಹೋಗಿದ್ದು ನಿಜ. ನಿನ್ನೆಯ ಉದ್ಘಾಟನೆ ಸಮಾರಂಭದ ಕಲ್ಲನ್ನು ಸಂಸದರಾದ ರಾಘವೇಂದ್ರ ಅವರ ಒಪ್ಪಿಗೆ ಮೇರೆಗೆ ಮಾಡಲಾಗಿದೆ. ಇಲ್ಲಿಯೂ ನನ್ನ ಪಾತ್ರವಿಲ್ಲ. ಸಮಾರಂಭಕ್ಕೆ ನೀವೂ ಬಂದಿದ್ದೀರಿ, ಸಮಾಜದ ಕೆಲಸದಲ್ಲಿ ರಾಜಕೀಯ ಬೇಡ.
–ಬೇಳೂರು ಗೋಪಾಲ ಕೃಷ್ಣ, ಮಾಜಿ ಶಾಸಕ