Malenadu Mitra
ರಾಜ್ಯ ಶಿವಮೊಗ್ಗ

ಶ್ರೀಕಾಂತ್ ಜಿಲ್ಲಾ ಜೆಡಿಎಸ್ ಸಾರಥ್ಯ ವಹಿಸಲಿ

ಶಿವಮೊಗ್ಗ ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ (ಜೆಡಿಎಸ್)ನ್ನು ಸಮರ್ಥವಾಗಿ ಬೆಳೆಸಬೇಕೆಂದರೆ ಅದರ ಸಾರಥ್ಯವನ್ನು ಮತ್ತೆ ಎಂ. ಶ್ರೀಕಾಂತ್ ಅವರಿಗೆ ವಹಿಸಬೇಕೆಂಬ ಬಲವಾದ ಕೂಗು ಶುಕ್ರವಾರ ವೀಕ್ಷಕರು ಕರೆದಿದ್ದ ಜಿಲ್ಲಾ ಪ್ರಮುಖರ ಸಭೆಯಲ್ಲಿ ವ್ಯಕ್ತವಾಯಿತು.
ಪಕ್ಷ ಬೆಳೆಯಲು ತಳಮಟ್ಟದಲ್ಲಿ ಕೆಲಸ ಮಾಡುವವರು ಬೇಕು. ಕಾರ್‍ಯಕರ್ತರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರಬೇಕು. ಹೊಂದಾಣಿಕೆ ರಾಜಕೀಯ ತರಬಾರದು. ಕಾರ್‍ಯಕರ್ತರು ಪಕ್ಷದಲ್ಲಿ ಇನ್ನೂ ಇದ್ದಾರೆ. ಗ್ರಾಪಂ ಚುನಾವಣೆಯೇ ಇದಕ್ಕೆ ಸಾಕ್ಷಿ. ಸಾಕಷ್ಟು ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿತರು ಗೆದ್ದು ಬಂದಿದ್ದಾರೆ. ಆದರೆ ನಾಯಕರ ಕೊರತೆ ಇದೆ. ಇದನ್ನು ಬಗೆಹರಿಸುವ ಕೆಲಸ ಆಗಬೇಕೆಂದರು.
ದೇಶದಾದ್ಯಂತ ರೈತರ ಚಳವಳಿ ನಡೆಯುತ್ತಿದೆ. ಇನ್ನೊಂದೆಡೆ ಬೆಲೆ ಏರಿಕೆಯ ವಿರುದ್ದ ಎಲ್ಲರೂ ಪ್ರತಿಭಟಿಸುತ್ತಿದ್ದಾರೆ. ಆದರೆ ಜೆಡಿಎಸ್‌ನ ಯಾವ ನಾಯಕರೂ ಪ್ರತಿಭಟನೆಗೆ ಮುಂದಾಗಿಲ್ಲ. ಕರೆಕೊಟ್ಟರೆ ನೂರಾರು ಜನರು ಬಂದು ಪ್ರತಿಭಟನೆ ಮಾಡುತ್ತಿದ್ದರು. ಹೋರಾಡುವವರಿಗೆ ಮುಖಂಡನೇ ಇಲ್ಲದ ಸ್ಥಿತಿ ಆಗಿದೆ. ಯುವ ಸಮೂಹ ಇನ್ನೂ ಪಕ್ಷದಲ್ಲಿ ಇದೆ. ಪಕ್ಷವನ್ನು ಅವರು ನಂಬಿಕೊಂಡಿದ್ದಾರೆ. ಆದರೆ ಅವರಿಗೊಬ್ಬ ನೇತಾರ ಬೇಕಾಗಿದ್ದಾನೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಮೇಯರ್ ನಾಗರಾಜ್ ಕಂಕಾರಿ, ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು. ಶ್ರೀಕಾಂತ್ ಅವರು ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಮತ್ತು ಕಾರ್‍ಯಕರ್ತರ ಸದಾ ಗೌರವಿಸುವ ಮನೋಭಾವದವರು. ಅವರಿಂದಲೇ ಜಿಲ್ಲೆಯಲ್ಲಿ ಪಕ್ಷ ಉಳಿದಿದೆ. ಅವರ ಕಾಲದಲ್ಲಿ ಮೂವರು ಶಾಸಕರನ್ನು ಜಿಲ್ಲೆಯಲ್ಲಿ ಗೆಲ್ಲಿಸಿದರು. ಜಿಪಂ, ತಾಪಂನಲ್ಲೂ ಅಧಿಕಾರ ಪಡೆಯಲು ಸಾಧ್ಯವಾಗಿತ್ತು. ಆದರೆ ಆನಂತರ ಪರಿಸ್ಥಿತಿ ಎಲ್ಲ ತಲೆಕೆಳಗಾಯಿತು ಎಂದರು.
ಗ್ರಾಮಾಂತರ ಜೆಡಿಎಸ್ ಮುಖಂಡ ಕಾಂತರಾಜ್ ಸೋಮಿನಕೊಪ್ಪ, ಜಿಲ್ಲೆಯಲ್ಲಿ ಪಕ್ಷವನ್ನು ಸದೃಢಗೊಳಿಸುವ ನಾಯಕ ಬೇಕು. ಅಸ್ತಿತ್ವ ಇದ್ದ ಪಕ್ಷವನ್ನು ಮಂಜುನಾಥ ಗೌಡರು ಹಾಳುಮಾಡಿದರು. ಇಷ್ಟವಿಲ್ಲದವರನ್ನು ಆ ಸ್ಥಾನಕ್ಕೆ ತಂದು ಕೂಡ್ರಿಸಿದ್ದು ತಪ್ಪು. ಅಧಿಕಾರ ಇದ್ದಾಗ ಕಾರ್‍ಯಕರ್ತರಿಗೆ ಅಧಿಕಾರ ಸಿಗುವಂತೆ ಮಾಡಬಹುದಿತ್ತು. ಕಾರ್‍ಯಕರ್ತರನ್ನು ಗಮನಿಸದೆ ಕೆಲಸ ಮಾಡದೆ ಪಕ್ಷವನ್ನು ಹಾಗೆ ಬಿಟ್ಟರು. ಯಾವತ್ತು ಪಕ್ಷ ಅಧಿಕಾರ ಕಳೆದುಕೊಂಡಿತೋ ಅಂದಿನಿಂದ ಅವರೂ ಕೂಡ ಕಾಣುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ರಿಪ್ಪನ್ಪೇಟೆಯ ಚಾಬುಸಾಬ್ ಮಾತನಾಡಿ, ಪಕ್ಷಕ್ಕಾಗಿ ೩೦-೪೦ ವರ್ಷ ದುಡಿದವರನ್ನು ಕಡೆಗಣಿಸಿ ಮಂಜುನಾಥ ಗೌಡರನ್ನು ಅಧ್ಯಕ್ಷರನ್ನಾಗಿಸಲಾಯಿತು. ಅವರನ್ನು ಅಧ್ಯ್ಕಕ್ಷನ್ನಾಗಿಸಿದ ಕ್ರಮ ಸರಿಯಲ್ಲ. ಇದರಿಂದ ಪಕ್ಷದ ಕತೆ ಏನಾಯಿತು ಎನ್ನುವುದು ಈಗ ಎಲ್ಲರಿಗೂ ಗೊತ್ತು. ಶ್ರೀಕಾಂತ್ ಅವರು ಅಧ್ಯಕ್ಷರಾಗಿ ಮುಂದುವರೆಯಬೇಕು. ಅವರಿಗೆ ಆರ್ಥಿಕ ಶಕ್ತಿಯನ್ನೂ ಪಕ್ಷ ತುಂಬಬೇಕು ಎಂದು ಸಲಹೆ ನೀಡಿದರು.
ಭದ್ರಾವತಿ ನಗರಸಭೆಯ ಮಾಜಿ ಅಧ್ಯ್ಕಷೆ ಸುಧಾಮಣಿ ಮಾತನಾಡಿ, ಕಾರ್‍ಯಕರ್ತರಲ್ಲಿ ಇಂದಿಗೂ ನಿಷ್ಠೆ ಇದೆ. ಆದರೆ ಜನರ ಜೊತೆ ಓಡಾಡುವ ನಾಯಕ ಬೇಕು ಎಂದರು.
ಪಕ್ಷದ ಯುವ ಮುಖಂಡರಾದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆತಂದು ಯುವಕರಲ್ಲಿ ಚೈತನ್ಯ ಮೂಡಿಸಬೇಕು. ಹೊಸ ಕಾರ್‍ಯಕರ್ತರು ಇದರಿಂದ ಪಕ್ಷಕ್ಕೆ ಬರುತ್ತಾರೆ. ಇರುವ ಕಾರ್‍ಯರ್ತರನ್ನು ಬೆಳೆಸುವ ಕೆಲಸವಾಗಬೇಕು ಎಂದು ನೂಮಾನ್ ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ವೀಕ್ಷಕ, ಮಾಜಿ ಸಚಿವ ಬಿ ಬಿ ನಿಂಗಯ್ಯ, ಅಡ್‌ಹಾಕ್ ಸಮಿತಿಯನ್ನು ರಚಿಸಲಾಗುವುದು. ರಾಜ್ಯ ಸರಕಾರಕ್ಕೆ ಇಂದಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ವರದಿ ನೀಡಲಾಗುವುದು ಎಂದರು.
ಮಾಜಿ ಶಾಸಕಿ ಶಾರದಾ ಪೂರ್‍ಯಾ ನಾಯ್ಕ್ ಮಾತನಾಡಿ, ಜಿಲ್ಲಾಧ್ಯಕ್ಷರ ನೇಮಕ ಶೀಘ್ರವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.
ರಾಜ್ಯ ಮುಖಂಡ ಎಂ. ಶ್ರೀಕಾಂತ್ ಮಾತನಾಡಿದರು. ಜಿಲ್ಲಾ ಮುಖಂಡ ಕೆ.ಎನ್. ರಾಮಕೃಷ್ಣ, ಶಿಕಾರಿಪುರದ ಎಚ್. ಟಿ. ಬಳಿಗಾರ, ಮೊದಲಾದವರು ಹಾಜರಿದ್ದರು.

ಮಂಜುನಾಥ ಗೌಡರು ಪಕ್ಷ ಬೆಳೆಸಲಿಲ್ಲ

ತೀರ್ಥಹಳ್ಳಿಯ ಜೆಡಿಎಸ್ ಮುಖಂಡ ಡಾ. ಟಿ. ಎಲ್. ಸುಂದರೇಶ್ ಮಾತನಾಡುವಾಗ ಮಂಜುನಾಥ ಗೌಡರು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿದರು. ಉತ್ತಮ ಕೆಲಸ ಮಾಡಿದರು. ಕಸ್ತೂರಿರಂಗನ್ ವರದಿ ವಿರುದ್ದ ಹೋರಾಟ ಮಾಡಿ ಪಕ್ಷ ಬಲಿಷ್ಠವಾಗುವಂತೆ ಮಾಡಿದರು ಎಂದು ಹೇಳುತ್ತಿದ್ದಂತೆಯೇ ಸೋಮಿನಕೊಪ್ಪ ಕಾಂತರಾಜ್ ಎದ್ದುನಿ ಂತು ಬಲವಾಗಿ ವಿರೋಧಿಸಿದರು.
ಮಂಜುನಾಥ ಗೌಡರು ಪಕ್ಷವನ್ನು ಬೆಳೆಸಲಿಲ್ಲ. ಅವರು ತೀರ್ಥಹಳ್ಳಿ ಕ್ಷೇತ್ರಕ್ಕೆ, ತಾಲೂಕಿಗೆ ಮಾತ್ರ ಸೀಮಿತವಾದರು. ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ಸುಂದರೇಶ್ ಮತ್ತೆ ಮಂಜುನಾಥ ಗೌಡರನ್ನು ಸಮರ್ಥಿಸಿಕೊಳ್ಳಲು ಮುಂದಾದಾಗ ಕಾಂತರಾಜ್ ವಿರೋಧಿಸಿದರು. ಶ್ರೀಕಾಂತ್ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಿಸಿದರು. ಸಭೆಯಲ್ಲಿ ಯಾರೂ ಮಂಜುನಾಥ ಗೌಡರ ಪರ ಮಾತನಾಡಲಿಲ್ಲ. ಅವರಿಂದ ಪಕ್ಷ ಹಾಳಾಯಿತೆನ್ನುವುದನ್ನು ಕೆಲಸವರು ನೇರವಾಗಿ, ಇನ್ನೂ ಕೆಲವರು ಪರೋಕ್ಷವಾಗಿ ಹೇಳಿದರು.

Ad Widget

Related posts

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಯಾವುದೂ ಇನ್ನೂ ಅಂತಿಮವಾಗಿಲ್ಲ

Malenadu Mirror Desk

ವಿಶ್ವವಿದ್ಯಾಲಯಗಳ ಸಂಶೋಧನೆಯ ಲಾಭ ರೈತರಿಗೆ ದೊರೆಯಬೇಕು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

Malenadu Mirror Desk

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ : ಕೆ.ಎಸ್.ಈಶ್ವರಪ್ಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.