ಪಂಚಮಸಾಲಿ ಸಮುದಾಯ ತಮ್ಮ ಹಕ್ಕಿಗೆ ಹೋರಾಡುತ್ತಿರುವುದು ಸರಿಯಿದೆ ಆದರೆ ಅವರನ್ನು ಯಾವುದೇ ಕಾರಣಕ್ಕೂ ಪ್ರವರ್ಗ -2A ಗೆ ಸೇರಿಸಬಾರದು ಎಂದು ಶ್ರೀನಾರಾಯಣಗುರು ವಿಚಾರವೇದಿಕೆ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈಡಿಗ-ಬಿಲ್ಲವ ಸಮುದಾಯಗಳ ಮುಖಂಡರು ಈ ಒತ್ತಾಯ ಮಾಡಿದರು. ಈ ವರ್ಗದಲ್ಲಿ 102 ಜಾತಿಗಳಿವೆ. ಈಗ ಕೇವಲ ಶೇ15 ಮೀಸಲಾತಿ ಸಿಗುತ್ತಿದೆ. ಬಲಾಡ್ಯ ಪಂಚಮಸಾಲಿ ಸಮಾಜವನ್ನು ಸೇರಿಸಿದರೆ ಇಲ್ಲಿರುವವರಿಗೆ ತೊಂದರೆ ಆಗುತ್ತದೆ. ಈ ವರ್ಗದಲ್ಲಿ ಕಡು ಬಡವ ಮತ್ತು ಶೋಷಿತ ಸಮುದಾಯಗಳೇ ಇವೆ. ಆದ್ದರಿಂದ ಯಾವುದೇ ಕಾರಣಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ನಮ್ಮ ಸಂವಿಧಾನದತ್ತ ಹಕ್ಕುಗಳಿಗೆ ಚ್ಯುತಿ ಬಂದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ್ ಹಾಗೂ ಬೇಳೂರು ಗೋಪಾಲಕೃಷ್ಣ ಅವರು, ಸರಕಾರ ಪಂಚಮಸಾಲಿ ಸಮಾಜಕ್ಕೆ ಸಿಗಬೇಕಿರುವ ಸೌಲಭ್ಯ ನೀಡಿದರೆ ನಮ್ಮ ತಕರಾರಿಲ್ಲ. ಅವರಿಗೆ ನಮ್ಮ ಬೆಂಬಲವೂ ಇದೆ. ಆದರೆ ನಮ್ಮ ಹಕ್ಕನ್ನು ಕಸಿದು ಅವರಿಗೆ ಕೊಡುವುದು ಸರಿಯಲ್ಲ ಎಂದರು.
ಆರ್.ಎಸ್.ಎಸ್ ಮುಖಂಡ ಸತ್ಯಜಿತ್ ಸೂರತ್ಕಲ್ ಮಾತನಾಡಿ, ಈಡಿಗ ಉಪ ಪಂಗಡಗಳು ಒಂದಾಗಿ ನಮ್ಮ ಶಕ್ತಿಯನ್ನು ತೋರಿಸಬೇಕು. ಯಡಿಯೂರಪ್ಪ ಹಾಗೂ ಸಿದ್ಧರಾಮಯ್ಯ ಇಂದು ಪ್ರಬಲ ನಾಯಕರಾಗಿರುವುದು ಅವರ ಸಮಾಜದಲ್ಲಿರುವ ಒಗ್ಗಟ್ಟಿನ ಕಾರಣಕ್ಕೆ. ನಮ್ಮಲ್ಲೂ ಒಗ್ಗಟ್ಟು ಮೂಡಿದರೆ ಬಲವಾದ ಶಕ್ತಿ ಬರುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ರಾಜ್ಯದ ಎಲ್ಲ ಮುಖಂಡರ ಜತೆ ಚರ್ಚೆ ಮಾಡಲಾಗುದು ಎಂದು ಹೇಳಿದರು.
ಕುಮಟಾ ಸೂರಜ್ ನಾಯ್ಕ್ ,ರಕ್ಷಿತ್ ಬಿ.ಕೆ.ಶಿವರಾಂ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
previous post
next post