ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯು ಪೊಲೀಸ್ ಕಮೀಷನರೇಟ್ ಆಗಿ ಮೇಲ್ದರ್ಜೆಗೇರಲಿದೆಯೇ ಎಂಬ ಚರ್ಚೆ ಈಗ ಆರಂಭವಾಗಿದೆ. ಮಾರ್ಚ್ ೮ ರಂದು ಮಂಡಿಸಲಿರುವ ಬಜೆಟ್‌ನಲ್ಲಿಯೇ ಸಿಎಂ ಈ ನಿರ್ಧಾರ ಪ್ರಕಟಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ರಾಜ್ಯದಲ್ಲಿ ಹಲವು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಿರುವ ಸರಕಾರ ಶಿವಮೊಗ್ಗದ ಎಲ್ಲಾ ಠಾಣೆಗಳನ್ನೂ ಪಿಐ ದರ್ಜೆಗೇರಿಸಿದೆ ಉನ್ನತೀಕರಿಸಿದೆ. ಶಿವಮೊಗ್ಗ ಗ್ರಾಮಾಂತರ ಹಾಗೂ ಕುಂಸಿ ಪೊಲೀಸ್ ಠಾಣೆಯನ್ನೂ ಮೇಲ್ದರ್ಜೆಗೇರಿಸಿದ್ದು, ಅಲ್ಲಿಗೆ ಪ್ರತ್ಯೇಕ ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಿದೆ. ಈಗಾಗಲೇ ವಿನೋಬನಗರ, ತುಂಗಾನಗರ ಠಾಣೆಗಳನ್ನು ಮೇಲ್ದರ್ಜೆಗೇರಿಸಿದ್ದ ಸರಕಾರ ಈಗ ಕುಂಸಿ ಠಾಣೆಯನ್ನೂ ಮೇಲ್ದರ್ಜೆಗೇರಿಸಿರುವುದೂ ಕಮಿಷನರೇಟ್ ಆಗಿ ಉನ್ನತೀಕರಿಸುವುದರ ಭಾಗ ಎಂದು ಹೇಳಲಾಗಿದೆ.
ಅರ್ಹತೆ ಇದೆ:
ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ಗಳಿವೆ. ಶಿವಮೊಗ್ಗದ ಕ್ರೈಂ ರೇಷಿಯೊ ಗಮನಿಸಿದರೆ ಇದನ್ನು ಪೊಲೀಸ್ ಕಮಿಷನರೇಟ್ ಆಗಿ ಉನ್ನತ ದರ್ಜೆಗೇರಿಸುವ ಎಲ್ಲ ಅರ್ಹತೆಗಳಿವೆ. ಶಿವಮೊಗ್ಗ ಸಿಟಿ ಒಂದರಲ್ಲಿಯೇ ಈಗ ೧೦ ಪಿಐ ಠಾಣೆಗಳಿದ್ದು, ಕೇವಲ ಒಬ್ಬರು ಡಿವೈಎಸ್ಪಿ ಇದ್ದಾರೆ. ಇಷ್ಟೊಂದು ಠಾಣೆಗಳ ಉಸ್ತುವಾರಿ ಒಬ್ಬರಿಗೆ ಹೊರೆಯಲಾಗಲಿದ್ದು, ಇನ್ನೊಂದು ಹುದ್ದೆ ಸೃಜಿಸುವ ಅವಕಾಶವೂ ಇದೆ.
ಕಮಿಷನರೇಟ್‌ನಿಂದಾಗುವ ಲಾಭ ಏನು ?
ಶಿವಮೊಗ್ಗ ಪೊಲೀಸ್ ಕಮಿಷನರೇಟ್ ಮಾಡಿದರೆ, ಡಿಐಜಿ ದರ್ಜೆಯ ಅಧಿಕಾರಿ ನೇಮಕ ಆಗಲಿದೆ. ಎಸಿಪಿ ದರ್ಜೆಯ ಅಧಿಕಾರಿಗಳು ಬರಲಿದ್ದು, ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಗಳು ಹಾಗೂ ಎಲ್ಲ ವರ್ಗದ ಸಿಬ್ಬಂದಿಗಳ ಸಂಖ್ಯೆ ಹೆಚ್ಚಲಿದೆ. ಇದಕ್ಕೆ ಅನುಗುಣವಾಗಿ ಇಲಾಖೆಗೆ ಅನುದಾನವೂ ಹೆಚ್ಚಲಿದೆ. ತಾವು ಮುಖ್ಯಮಂತ್ರಿಯಾದ ಮೇಲೆ ಶಿವಮೊಗ್ಗದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿರುವ ಯಡಿಯೂರಪ್ಪ ಅವರು, ಶಿವಮೊಗ್ಗ ಪೋಲಿಸ್ ಕಮಿಷನರೇಟ್ ಘೋಷಣೆ ಮಾಡುವರೆ ಎಂಬುದನ್ನು ಕಾದು ನೋಡಬೇಕಿದೆ.